ಜ.26ಕ್ಕೆ ಧನು ರಾಶಿಗೆ ಶನಿ ಪ್ರವೇಶ: ಯಾವ ರಾಶಿಗೆ ಏನು ಫಲ, ಪ್ರಭಾವ?

Written by: ಪಂಡಿತ್ ವಿಠ್ಠಲ ಭಟ್
Subscribe to Oneindia Kannada

ಜ್ಯೋತಿಷಿ ಹತ್ತಿರ ಬರುವ ವ್ಯಕ್ತಿಯ ಪ್ರಶ್ನೆಗಳ ಪೈಕಿ ನಮಗೆ ಶನಿ, ಗುರು ಹೇಗಿದೆ ಅಂತ ಹೇಳಿ ಸ್ವಾಮಿ ಎಂಬುದು ಸಾಮಾನ್ಯವಾದ ಪ್ರಶ್ನೆ ಆಗಿಯೇ ಇರುತ್ತದೆ. ವಿದ್ಯಾವಂತ ಸಮಾಜದಿಂದ ಆರಂಭಿಸಿ ಅವಿದ್ಯಾವಂತರ ತನಕ ನವಗ್ರಹಗಳಲ್ಲಿ ನಿತ್ಯ ಜೀವನದ ಮೇಲೆ ಪ್ರಭಾವ ಬೀರುವಂಥ ಗ್ರಹಗಳು ಗುರು, ಶನಿ ಎಂದು ಅರಿತಿದ್ದಾರೆ.

ಈ ಎರಡು ಗ್ರಹಗಳ ಬಲ ಇದ್ದರೆ ಏನೇ ಕಷ್ಟ ನಷ್ಟಗಳು ಬಂದರೂ ಎದುರಿಸಿ ನಿಲ್ಲಬಹುದು ಎಂದು ತಿಳಿದಿದ್ದಾರೆ. ಶನೈಶ್ಚರನನ್ನು ನಾವು ಕೆಡುಕು ಮಾಡುವ ಗ್ರಹವಾಗಿ ಅಥವಾ ಅತ್ಯಂತ ಕಷ್ಟಗಳನ್ನು ನೀಡುವ ಗ್ರಹವಾಗಿ ನೋಡಿದ್ದೇ ಹೆಚ್ಚು. ಆದರೆ ನಿಜ ಸಂಗತಿ ಏನೆಂದರೆ, ಶನೈಶ್ಚರ ಗ್ರಹದಷ್ಟು ಒಳಿತನ್ನು ಇನ್ನ್ಯಾವ ಗ್ರಹ ಸಹ ಮಾಡಲಾಗದು.[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಇಂಥ ಶನಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚಾರ ಮಾಡಲು ಎರಡೂವರೆ ವರ್ಷ ಬೇಕಾಗುತ್ತದೆ. ಆದುದರಿಂದ ನಮ್ಮ ರಾಶಿಯ ಹಿಂದಿನ ರಾಶಿಗೆ ಶನಿ ಗ್ರಹ ಬಂದಾಗ ಅಲ್ಲಿ ಎರಡೂವರೆ ವರ್ಷ, ನಮ್ಮ ರಾಶಿಯಲ್ಲಿ ಎರಡೂವರೆ ವರ್ಷ ಹಾಗೂ ನಮ್ಮ ಮುಂದಿನ ರಾಶಿಯಲ್ಲಿ ಎರಡೂವರೆ ವರ್ಷ ಒಟ್ಟು ಏಳೂವರೆ ವರ್ಷ ಕಾಲ ನಾವು ಶನೈಶ್ಚರ ಗ್ರಹದ ಪ್ರಭಾವಳಿಯಲ್ಲಿ ಇರುತ್ತೇವೆ.

ಈ ಏಳೂವರೆ ವರ್ಷವನ್ನೇ ಹಿಂದಿಯಲ್ಲಿ ಸಾಡೇ ಸಾತ್ ಎಂದು ಕರೆಯುವುದು. ಇನ್ನು ನಮ್ಮ ರಾಶಿಯಿಂದ ನಾಲ್ಕನೇ ರಾಶಿಗೆ ಶನಿ ಸಂಚಾರ ಆದಾಗ ಅರ್ಧಾಷ್ಟಮ, ಐದನೇ ಮನೆಗೆ ಶನಿ ಸಂಚಾರ ಆದಾಗ ಪಂಚಮ ಶನಿ ಹಾಗೂ ಎಂಟನೆ ಮನೆಯ ಸಂಚಾರದ ವೇಳೆ ಅಷ್ಟಮ ಶನಿ ಎನ್ನುತ್ತಾರೆ.[ಹಣ ಸ್ಥಿರವಾಗಲು, ಲಕ್ಷ್ಮಿ ಕಟಾಕ್ಷಕ್ಕೆ ಇಲ್ಲಿವೆ ರಹಸ್ಯ ಸೂತ್ರಗಳು]

ಸಾಡೇ ಸಾತ್, ಅರ್ಧಾಷ್ಟಮ, ಪಂಚಮ, ಅಷ್ಟಮ ಅಥವಾ ಶನಿ ದೆಶೆ ಯಾವುದೇ ಇರಲಿ ಈ ಎಲ್ಲ ಸಮಯದಲ್ಲಿಯೂ ಶನೈಶ್ಚರ ಕೇವಲ ಕಷ್ಟಗಳನ್ನೇ ನೀಡುತ್ತಾನೆ ಎಂದರ್ಥವಲ್ಲ! ನಾವು ಶನಿ ಗ್ರಹದ ಪ್ರಭಾವಳಿಯಲ್ಲಿ ಇರುತ್ತೇವೆ ಎಂದಷ್ಟೇ ತಿಳಿಯಬೇಕು. ಇನ್ನು ಒಳಿತು, ಕೆಡಕುಗಳು ವ್ಯಕ್ತಿಗತ ಜಾತಕಗಳಲ್ಲಿ ಶನಿಗ್ರಹದ ಸ್ಥಾನದ ಮೇಲೆ ಅವಲಂಬಿತವಾಗಿರುತ್ತದೆ.[ಶನೈಶ್ಚರನ ಅನುಗ್ರಹಕ್ಕಾಗಿ ಇಲ್ಲಿವೆ 10 ಮಾರ್ಗಗಳು]

ಜನವರಿ 26ರಂದು, ಇದೇ ಪುಷ್ಯ ಮಾಸದ ಕೃಷ್ಣ ಪಕ್ಷದ ಚತುರ್ದಶಿ ಗುರುವಾರದಂದು ಜ್ಯೇಷ್ಠಾ ನಕ್ಷತ್ರದ ನಾಲ್ಕನೇ ಪಾದದಿಂದ ಮೂಲಾ ನಕ್ಷತ್ರದ ಒಂದನೇ ಪಾದವಾದ ಧನು ರಾಶಿಗೆ ಶನೈಶ್ಚರ ಗ್ರಹ ಸಂಚಾರ ಮಾಡಲಿದೆ. ಇದು ಖಂಡಿತಾ ಹೆದರುವ ವಿಷಯ ಅಲ್ಲದಿದ್ದರೂ ಅಂದಿನಿಂದ ಎರಡೂವರೆ ವರ್ಷದ ಸುಗಮ ಜೀವನಕ್ಕಾಗಿ ಅವಶ್ಯವಾಗಿ ಗಮನಿಸಲೇ ಬೇಕಾದ ವಿಚಾರ ಇದು.[ನರೇಂದ್ರ ಮೋದಿ ಜನ್ಮ ಜಾತಕ - ಮುಖ್ಯಾಂಶಗಳು]

ಪ್ರಮುಖವಾಗಿ ವೃಷಭ, ಸಿಂಹ, ಕನ್ಯಾ, ವೃಶ್ಚಿಕ, ಧನು, ಮಕರ ಈ ಆರು ರಾಶಿಯವರು ಎಚ್ಚರದಿಂದ ಇರುವುದು ಒಳಿತು. ಇನ್ನು ಮೇಷ, ಕರ್ಕ, ತುಲಾ ಈ ಮೂರು ರಾಶಿಯವರಿಗೆ ಸಂತಸದ ಕಾಲ ಕುಂಭ, ಮೀನ ರಾಶಿಗಳಿಗೆ ವಿಶೇಷ ಸಮಸ್ಯೆಗಳಿಲ್ಲ.

ಮೇಷ: ಎರಡೂವರೆ ವರ್ಷದ ಸಮಸ್ಯೆ ಕರಗಿ ಖುಷಿ ಪಡುವ ಕಾಲ

ಶನಿ ಗ್ರಹದ ಧನು ರಾಶಿ ಸಂಚಾರದಿಂದ ಅತ್ಯಂತ ಸಂತೋಷ ಸಮಯ ಇದು. ಶನೈಶ್ಚರನ ಅನುಗ್ರಹ ಆಗುವುದರಲ್ಲಿ ಪ್ರಮುಖ ಪಾಲು ಮೇಷ ರಾಶಿಯವರಿಗೆ ಸಿಗುತ್ತದೆ. ಅದಕ್ಕೆ ಕಾರಣವೂ ಇದೆ. ಕಳೆದ ಎರಡೂವರೆ ವರ್ಷದಿಂದ ಅನುಭವಿಸುತ್ತಿರುವ ಎಲ್ಲ ಆರೋಗ್ಯ ಸಮಸ್ಯೆ, ವ್ಯಾವಹಾರಿಕ ಹಿನ್ನಡೆ, ಉದ್ಯೋಗ ತಾಪತ್ರಯ ಎಲ್ಲಕ್ಕೂ ಒಂದು ಅಂತ್ಯವನ್ನು ಇನ್ನು ಮೇಲೆ ಕಾಣಬಹುದು.

ಅದರಲ್ಲಿಯೂ ಕಳೆದ ಎರಡೂವರೆ ವರುಷಗಳಿಂದ ಯಾವ ವೈದ್ಯರಿಗೆ ತೋರಿಸಿದರೂ ಯಾವ ವಿಧದ ಔಷಧಿ ಮಾಡಿದರೂ ಗುಣವಾಗದ ಆರೋಗ್ಯ ಬಾಧೆಗಳು ಇದ್ದಲ್ಲಿ ಖಂಡಿತ ಇನ್ನು ಮುಂದೆ ಅವು ವಾಸಿಯಾಗುವುದರಲ್ಲಿ ಸಂಶಯವಿಲ್ಲ. ಅರೋಗ್ಯ ಬಾಧೆಗಳಲ್ಲಿ ಏನೇ ಔಷಧಿ ಮಾಡಿದರೂ ಗುಣವಾಗದ ಬೆನ್ನು, ಸೊಂಟದ ಭಾಗ ನೋವು, ಮೊಣಕಾಲಿನ ನೋವು, ಕೂರಲೂ ಆಗದೆ- ನಿಲ್ಲಲೂ ಆಗದೆ ವ್ಯಥೆ ಪಡುತ್ತಿರುವವರು ಶೀಘ್ರ ಗುಣಮುಖರಾಗುತ್ತಾರೆ.

ಹೃದಯ ಸಂಬಂಧಿಯಾದ ಕಾಯಿಲೆ ಇದ್ದವರ ಆರೋಗ್ಯವೂ ಕ್ರಮೇಣ ಸುಧಾರಿಸುತ್ತಾ ಬರುತ್ತದೆ.

ವೃಷಭ: ಆರೋಗ್ಯ ಎಚ್ಚರ, ಹೆದರಿಕೆಗಿಂತ ಜಾಗ್ರತೆ ಮುಖ್ಯ

ತುಂಬ ಎಚ್ಚರದಿಂದ ಇರಬೇಕಾದವರು ವೃಷಭ ರಾಶಿಯವರು ! ಹಾಗಂತ ಹೆದರಿ ಕೂರ ಬೇಕಾದ ಪರಿಸ್ಥಿತಿ ಇಲ್ಲ. ಆದರೆ ಯಾವುದೇ ಕಾರಣಕ್ಕೂ ಅರೋಗ್ಯ ವಿಚಾರವಾಗಿ ಅತ್ಯಂತ ಜಾಗರೂಕರಾಗಿರಬೇಕು. ದಿನವೂ ಸಮಯಕ್ಕೆ ಸರಿಯಾಗಿ, ಕ್ರಮಬದ್ಧವಾದ ಹಾಗೂ ಪೌಷ್ಟಿಕವಾದ ಆಹಾರ ಸೇವನೆ ಪ್ರಾರಂಭಿಸ ಬೇಕು.

ವ್ಯಾಯಾಮ, ಪ್ರಾಣಾಯಾಮ ಮತ್ತು ಯೋಗಾಸನ ಇತ್ಯಾದಿಗಳನ್ನು ರೂಢಿ ಮಾಡಿಕೊಂಡಲ್ಲಿ ಮುಂದಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ಅರ್ಧ ಪರಿಹಾರ ಮಾಡಿಕೊಂಡಂತೆಯೇ ಸರಿ. ಇಲ್ಲಿ ವೃಷಭ ರಾಶಿಯವರು ಗಮನಿಸ ಬೇಕಾದ ಅಂಶ ಎಂದರೆ ಕಷ್ಟಗಳು ಅಥವಾ ಅರೋಗ್ಯ ಬಾಧೆಗಳು ಅಷ್ಟಮ ಶನಿ ಪ್ರಭಾವ ಪ್ರಾರಂಭ ಆದ ತಕ್ಷಣ ಆಗೋದಿಲ್ಲ.

ನಿಜವಾದ ಸಮಸ್ಯೆ ಆರಂಭ ಆಗೋದು ಅಥವಾ ಇರುವ ಸಮಸ್ಯೆ ಎಷ್ಟು ದೊಡ್ಡದು ಎಂದು ನಿಮ್ಮ ಅರಿವಿಗೆ ಬರುವುದು ಈ ವರ್ಷದ ಸೆಪ್ಟೆಂಬರ್ ತಿಂಗಳ ನಂತರವೇ. ಜಾತಕದಲ್ಲಿ ದಶಾ- ಭುಕ್ತಿ ಗಳು ಉತ್ತಮವಾಗಿ ಇದ್ದಲ್ಲಿ ಇನ್ನೂ ತಡ ಆಗಬಹುದು. ಆದರೂ ಸಮಸ್ಯೆ ಬರುವ ತನಕ ಕಾದು, ಬಂದ ಮೇಲೆ ಪರಿಹಾರಕ್ಕಾಗಿ ಒದ್ದಾಡುವುದಕಿಂತ ಎಚ್ಚರವಹಿಸುವುದು ಬುದ್ಧಿವಂತಿಕೆ ಎನಿಸಿಕೊಳ್ಳುತ್ತದೆ.

 

ಮಿಥುನ: ಅಷ್ಟಾಗಿ ಕಾಡದು ಸಮಸ್ಯೆ, ಕೆಲಸಗಳು ಮಾತ್ರ ಮುಂದಕ್ಕೆ

ನಿಮಗೆ ಹೆಚ್ಚು ವ್ಯತ್ಯಾಸಗಳಿಲ್ಲ. ನಿಮ್ಮ ದೂರ ಪ್ರಯಾಣಗಳು ಕಡಿಮೆ ಆಗಬಹುದು. ವಿದೇಶ ಪ್ರಯಾಣಗಳು ಸಹ ಮುಂದಕ್ಕೆ ಹೋಗಬಹುದು. ಆದರೂ ವಿದೇಶಕ್ಕೆ ಹೋಗಲೇಬೇಕು ಎಂದಿದ್ದರೆ ಇನ್ನೆರಡೂವರೆ ವರುಷಗಳಲ್ಲಿ ಎಲ್ಲವನ್ನೂ ಮುಗಿಸಿಕೊಂಡರೆ ಒಳಿತು. ಕಾರಣ ವೃಷಭ ರಾಶಿಯವರಿಗೆ ಅಷ್ಟಮ ಶನಿ ಮುಗಿದ ನಂತರ ನಿಮಗೆ ಪ್ರಾರಂಭ ಆಗುವುದು. ಅಷ್ಟಮ ಶನಿ ಪ್ರಭಾವದಲ್ಲಿ ಇದ್ದಾಗ ವಿದೇಶದಲ್ಲಿ ಉಳಿದುಕೊಳ್ಳುವುದು ಪ್ರಮಾದಕರ.

ಸ್ನೇಹಿತರ ಜೊತೆಗೆ ವ್ಯವಹಾರ ಮಾಡುವಾಗ ಬಹಳ ಎಚ್ಚರವಾಗಿರಿ. ಯಾವುದೇ ಕಾರಣಕ್ಕೂ ಬಾಳಸಂಗಾತಿಯೊಂದಿಗೆ ಜಗಳ ಬೇಡ. ಅನುಸರಿಸಿಕೊಂಡು ಹೋಗುವುದನ್ನು ಹಿಂದಿಗಿಂತಲೂ ಹೆಚ್ಚು ಮಾಡಿಕೊಂಡರೆ ಒಳ್ಳೆಯದು. ಹಣ ಬರುತ್ತದೆ. ಆದರೆ ಸಾಲ ಕೊಡುವುದಕ್ಕೆ ಹೋಗಬೇಡಿ. ನ್ಯಾಯಾಲಯದ ವ್ಯಾಜ್ಯಗಳನ್ನು ಎರಡೂವರೆ ವರ್ಷದೊಳಗೆ ನಿವಾರಿಸಿಕೊಳ್ಳದಿದ್ದರೆ ಮಾತ್ರ ಹೋಗಿ. ಇಲ್ಲದಿದ್ದರೆ ಸೆಪ್ಟೆಂಬರ್ ನಂತರ ಕೋರ್ಟ್ ಮೆಟ್ಟಿಲೇರಬಹುದು.

 

ಕರ್ಕಾಟಕ: ಸಾಲದಿಂದ ಮುಕ್ತಿ, ಶನಿ ಬಲವೇ ಶಕ್ತಿ

ಕಷ್ಟಗಳಿಂದ ಪಾರಾಗಿ ನೆಮ್ಮದಿಯ ನಿಟ್ಟುಸಿರು ಬಿಡಬಹುದಾದ ಇನ್ನೊಂದು ರಾಶಿ ಕರ್ಕಾಟಕ. ವ್ಯಾವಹಾರಿಕವಾಗಿ ಸತತ ಎರಡೂವರೆ ವರುಷಗಳಿಂದ ಕಷ್ಟಪಟ್ಟು, ಸಾಲ- ಸೋಲಗಳಲ್ಲಿ ಸಿಲುಕಿ ಒದ್ದಾಡಿದ್ದ ನೀವು ಈಗ ನಿಧಾನವಾಗಿ ಅವುಗಳಿಂದ ಬಿಡುಗಡೆ ಹೊಂದುತ್ತೀರಿ. ಮಾಡದ ತಪ್ಪಿಗೆ ಕೆಲವರು ಶಿಕ್ಷೆ ಅನುಭವಿಸಿ ನಷ್ಟ ಹೊಂದಿದರೆ, ಮತ್ತೆ ಕೆಲವರು ಹೊಸದಾದ ವ್ಯವಹಾರಗಳು ಉತ್ತಮ ಲಾಭ ಕೊಡುತ್ತವೆ ಎಂದು ಹೋಗಿ ಅವಮಾನಗಳನ್ನು ಅನುಭವಿಸಿದವರೇ ಹೆಚ್ಚು! ಕರ್ಕ ರಾಶಿಯವರಿಗೆ ಸದ್ಯಕ್ಕೆ ಗುರು ಬಲವಿಲ್ಲ. ಇನ್ನೊಂದುವರೆ ವರುಷ ಗುರು ಬಲ ಬರುವುದೂ ಇಲ್ಲ. ಆದುದರಿಂದ ಪಂಚಮ ಶನಿ ಮುಗಿದರೂ ತಕ್ಷಣವೇ ಅದರಿಂದಾದ ಎಲ್ಲ ಸಮಸ್ಯೆಗಳಿಂದ ಹೊರ ಬರುವುದಿಲ್ಲ. ಸಮಯ ಸರಿದಂತೆ ಸಮಸ್ಯೆಗಳು ನಿಧಾನವಾಗಿ ಪರಿಹಾರಗೊಳ್ಳುತ್ತವೆ.

ಸಿಂಹ ರಾಶಿ: ಕೆಲಸ ಬಿಡುವ ಆಲೋಚನೆ ಬಿಟ್ಟು, ಬದುಕಲು ಕಲಿಯಿರಿ

ನೀವು ಬಹಳ ಎಚ್ಚರಿಕೆಯಿಂದ ಇರಬೇಕು. ಅದರಲ್ಲಿಯೂ ವ್ಯಾವಹಾರಿಕವಾಗಿ ಪ್ರತಿ ಹೆಜ್ಜೆಯನ್ನೂ ಅತೀ ಸೂಕ್ಷ್ಮವಾಗಿ ಗಮನಿಸಿ ಇಡಬೇಕು. ಸೆಪ್ಟೆಂಬರ್ ತನಕ ಪೂರ್ಣ ಗುರು ಬಲ ಇರುವುದರಿಂದ ನಿಮಗೆ ಅಷ್ಟಾಗಿ ಸಮಸ್ಯೆಗಳೇನೂ ಕಾಣುವುದಿಲ್ಲ. ಹೊಸದಾದ ಮಿತ್ರರು ಸಿಗುತ್ತಾರೆ. ಹಳೆ ಮಿತ್ರರೇ ಹೊಸದೊಂದು ವ್ಯಾಪಾರ- ವ್ಯವಹಾರ ಮಾಡೋಣ, ಜೊತೆ ಇರು, ಸ್ವಲ್ಪ ಬಂಡವಾಳ ಹಾಕು ಎನ್ನುತ್ತಾ ಮತ್ತೆ ನಿಮ್ಮ ಬಳಿ ಬರುತ್ತಾರೆ. ಸದ್ಯ ಗುರು ಬಲ ಇರುವುದರಿಂದ ನೀವು ಮಾಡಿದ ಚಿಕ್ಕ ಹೂಡಿಕೆ ಗಮನಾರ್ಹ ಲಾಭವನ್ನೇ ಕೊಡಿಸುತ್ತದೆ. ಆದರೆ, ಅದನ್ನೇ ನಂಬಿ ಸೆಪ್ಟೆಂಬರ್ ನಂತರ ಸಾಲ ಮಾಡಿ, ನಿಮ್ಮ ಉಳಿತಾಯದ ಹಣ ಅಥವಾ ನಿಮ್ಮ ಸ್ಥಿರಾಸ್ತಿಗಳನ್ನು ಅಡಮಾನ ಇಟ್ಟು ಅಥವಾ ಮಾರಾಟ ಮಾಡಿ ದುಡ್ಡು ತಂದು ನೀವು ಬಂಡವಾಳ ಹೂಡಿದರೆ ಮಾತ್ರ ಎಲ್ಲ ಕಳೆದುಕೊಂಡು ಚಿಂತಿಸಬೇಕಾಗಬಹುದು.

ಇನ್ನು ಹೊಸ ಉದ್ಯೋಗ ಹುಡುಕಲು ಇರುವ ಉದ್ಯೋಗಕ್ಕೆ ರಾಜೀನಾಮೆ ಕೊಡದಿರಿ. ಇರುವ ಸ್ಥಳದಲ್ಲಿಯೇ ಇನ್ನೂ ಎರಡೂವರೆ ವರ್ಷ ಕಳೆಯಿರಿ. ಇಲ್ಲ, ಹೊಸ ಉದ್ಯೋಗಕ್ಕೆ ಹೊಗಲೇಬೇಕು ಎಂದಾದಲ್ಲಿ ಅಲ್ಲಿ ಶೇ 100ರಷ್ಟು ಖಾತ್ರಿ ಸಿಕ್ಕ ನಂತರವೇ ಈಗಿರುವ ಕೆಲಸ ಬಿಡಿ.

ಇನ್ನು ಸರಕಾರಿ ಉದ್ಯೋಗಿಗಳಿಗೆ ಮನಸ್ಸಿಲ್ಲದ ಜಾಗಗಳಿಗೆ ವರ್ಗಾವಣೆ ಆಗಬಹುದು ಹಾಗೂ ವರ್ಗಾವಣೆ ಆದ ಜಾಗದಲ್ಲಿ ಮಾನಸಿಕ ಕಿರಿಕಿರಿ ಅನುಭವಿಸುವ ಸಾಧ್ಯತೆಗಳಿವೆ. ಯಾವುದೇ ಕಾರಣಕ್ಕೂ ಯಾರಿಗೂ ಸಾಲ ಕೊಡಬೇಡಿ. ಅಷ್ಟೇ ಅಲ್ಲ, ನಿಮ್ಮ ಸ್ನೇಹಿತ ಅಥವಾ ಯಾರಿಗೇ ಆಗಲಿ ಜಾಮೀನಾಗಿ ನಿಂತು ಸಾಲ ಕೊಡಿಸಬೇಡಿ.

ಇನ್ನು ನೀವು ನಿಮ್ಮ ದುಡಿಮೆಯ ಹಣದಲ್ಲಿ ಆ ಸಾಲ ತೀರಿಸಲು ಸಿದ್ಧರಿದ್ದರೆ ಕೊಡಿಸಿ. ನೂತನ ಗೃಹ ನಿರ್ಮಾಣ, ವಿದೇಶ ಪ್ರಯಾಣ ಹಾಗೂ ಅಲ್ಲಿಯೇ ವಾಸ ಮಾಡುವ ಆಲೋಚನೆ, ದೊಡ್ಡದಾಗಿ ಬಂಡವಾಳ ಹೂಡಿಕೆ ಇತ್ಯಾದಿಗಳನ್ನು ಮಾಡದೇ ಇದ್ದಲ್ಲಿ ಹೆಚ್ಚು ತೊಂದರೆ ಅನುಭವಿಸದೆ ಪಂಚಮ ಶನಿಯ ಪ್ರಭಾವ ಮುಗಿಸಬಹುದು.

 

ಕನ್ಯಾ: ಚಿಂತೆ ಹಚ್ಚಿಕೋಬೇಡಿ, ಆಹಾರ-ನಿದ್ರೆ ಬಗ್ಗೆ ಗಮನ ಕೊಡಿ

ಚತುರ್ಥ ಶನಿ, ಅಷ್ಟೇ ಅಲ್ಲದೆ ಜನ್ಮದಲ್ಲಿ ಗುರು ಇರುವುದರಿಂದ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಈ ಎರಡೂ ಸ್ಥಿತಿ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಹೆಚ್ಚಿನ ಒತ್ತಡದಲ್ಲಿ ಕೆಲಸಗಳನ್ನು ಮಾಡಲು ಹೋಗದಿರಿ. ತಿಂದ ಆಹಾರ ಜೀರ್ಣವಾಗದೆ ಸಮಸ್ಯೆಯಾಗುತ್ತದೆ. ಶನಿ ಹಾಗೂ ಜನ್ಮದಲ್ಲಿ ಗುರು ಇರುವುದರಿಂದಾಗಿ ಅಗ್ನಿಮಾಂದ್ಯ ಉಂಟಾಗಿ ಅಜೀರ್ಣ ಉಂಟಾಗುತ್ತದೆ. ಬೇರೆ ಕಾಯಿಲೆಗಳಿಗೆ ಇದುವೇ ಮುನ್ನುಡಿ ಬರೆದರೂ ಆಶ್ಚರ್ಯವಿಲ್ಲ!

ಅತಿಯಾದ ಕೂದಲು ಉದುರುವಿಕೆ, ನಿದ್ರಾಹೀನತೆ ಹೀಗೆ ಒಂದರ ಹಿಂದೆ ಒಂದು ಸಾಲುಗಟ್ಟಿ ಬರುತ್ತವೆ. ಗಮನಿಸಿ, ಆದಷ್ಟೂ ಆಯುರ್ವೇದಕ್ಕೆ ಹೆಚ್ಚಿನ ಪ್ರಾಮುಖ್ಯ ಕೊಡಿ. ಪರಿಹಾರಗಳಿಗೆ ಅದೇ ಔಷಧೀಯ ಪದ್ಧತಿಯನ್ನು ಅನುಸರಿಸಿ. ನೆನಪಿಡಿ, ಅಯುರ್ವೇದ ನಿಧಾನ ಎನ್ನುವುದು ತ್ವರಿತ ಹಾಗೂ ದೀರ್ಘಾವಧಿಯ ಉಪಶಮನ ನೀಡುತ್ತದೆ. ಆಹಾರ ಸೇವನೆ ಹಾಗೂ ನಿದ್ರೆ ಈ ಎರಡನ್ನೂ ಸರಿಯಾಗಿ ಮಾಡಿದರೆ ನಿಮ್ಮ ಅರ್ಧ ಸಮಸ್ಯೆ ಪರಿಹಾರ.

 

ತುಲಾ: ಕಲಿತ ಪಾಠ ಸುಖದ ತಂಗಾಳಿ ಬೀಸುತ್ತದೆ

ಬದಲಾವಣೆ ಗಾಳಿ ಖಂಡಿತಾ ನಿಮಗೆ ಬೀಸುತ್ತದೆ. ಅದರಲ್ಲಿ ಎರಡು ಮಾತಿಲ್ಲ. ಆದರೆ ಅದಕ್ಕೆ ಇನ್ನೂ ಸ್ವಲ್ಪ ಸಮಯ ಬಾಕಿ ಇದೆ. ಆದರೆ ಒಂದು ವಿಚಾರ ಸತ್ಯ, ನೀವು ಏಳೂವರೆ ವರ್ಷದಷ್ಟು ದೀರ್ಘಾವಧಿಯ ಶನಿ ಪ್ರಭಾವವನ್ನು ಕಳೆದಿದ್ದೀರಿ. ಜೀವನದ ದೊಡ್ಡ ದೊಡ್ಡ ನೀತಿ ಪಾಠಗಳನ್ನು ತಂದೆಯ ಸ್ಥಾನದಲ್ಲಿ ನಿಂತು ನಿಮಗೆ ಅನುಭವಕ್ಕೆ ಬರುವಂತೆ ಮಾಡಿದ್ದು ಶನಿ ಗ್ರಹ.

ಯಾರನ್ನು ನಂಬ ಬೇಕು? ನಂಬಿದರೂ ಎಷ್ಟು ನಂಬಬೇಕು? ಎಂಬ ವಿಚಾರಗಳನ್ನು ಈಗ ನೀವು ಇತರರಿಗೆ ಪಾಠ ಮಾಡುವಷ್ಟು ಕಲಿತಿದ್ದೀರಿ! ಕಷ್ಟದ ಸಮಯದಲ್ಲಿ ಬಯ್ದುಕೊಂಡಿದ್ದರೂ ನಿಮ್ಮ ಕಣ್ಣು ತೆರೆಸಿದ್ದಕ್ಕೆ ಈಗ ಶನೈಶ್ಚರನಿಗೆ ನೀವು ಖಂಡಿತ ನಮಸ್ಕರಿಸುತ್ತೀರಿ. ಸ್ವಾಮಿ ನೀನು ಬರದೇ ಇದ್ದಿದ್ದರೆ ನಾನು ಇನ್ನು ಮೂರ್ಖನಾಗಿಯೇ ಇರುತ್ತಿದ್ದೆ ಎಂದು ಹೊಗಳುತ್ತೀರಿ.

ಯಾವುದು ಏನೇ ಆಗಲಿ ಈಗಲೂ ವ್ಯಯದ ಗುರು ಸ್ಥಾನದಿಂದ ನೀವು ಕಷ್ಟದಲ್ಲಿಯೇ ಇದ್ದರೂ ಸಾಡೇ ಸಾತ್ ಕೊನೆ ಎರಡೂವರೆ ವರುಷ ಶನಿ ನಿಮಗೆ ಒಳಿತನ್ನೇ ಮಾಡಿದ್ದಾನೆ. ಆಗಿದ್ದು ಆಯಿತು, ಇನ್ನು ಮುಂದೆ ಶನಿ ಕಾಟವಿಲ್ಲದೇ ಸುಖದಿಂದ ಇರಬಹುದು.

 

ವೃಶ್ಚಿಕ: ಸಾಡೇ ಸಾತ್ ನ ಅಂತಿಮ ಘಟ್ಟ, ತುಂಬ ನೋವು ಆಗೋದಿಲ್ಲ

ಸಾಡೆಸಾಥ್ ನ ಕೊನೆ ಎರಡೂವರೆ ವರುಷಗಳನ್ನು ನೀವು ಕಳೆಯಬೇಕಿದೆ. ಈ ತನಕ ಅಂದರೆ ಐದು ವರುಷಗಳಲ್ಲಿ ನೀವು ಕಷ್ಟಗಳನ್ನೇ ಹೆಚ್ಚು ನೋಡಿದ್ದರೆ ಮಾತ್ರ ಈ ಮುಂದಿನ ಎರಡೂ ವರೆ ವರುಷಗಳು ಶನಿ ಗ್ರಹದಿಂದ ತೊಂದರೆ ಆಗುವುದಿಲ್ಲ. ಕೆಲವರಿಗೆ ಮಾತ್ರ ಕುಟುಂಬದಲ್ಲಿ ಕಲಹ ಅಥವಾ ಧನ ಹಾನಿ ಆದರೂ ಅದು ಎಲ್ಲರಿಗೂ ಅನ್ವಯಿಸುವುದಿಲ್ಲ.

ಸಾಮಾನ್ಯವಾಗಿ ಸಾಡೇ ಸಾತ್ ನ ಕೊನೆ ದಿನಗಳು ಗುರುಬಲ ಇಲ್ಲದಿದ್ದರೂ ಉತ್ತಮವಾಗಿಯೇ ಇರುತ್ತದೆ. ಆದರೆ ಇದೂ ಎಲ್ಲರಿಗೂ ಅನ್ವಯಿಸುವುದಿಲ್ಲ. ಕಬ್ಬಿಣ, ಸಿಮೆಂಟ್ ಇತ್ಯಾದಿ ವ್ಯಾಪಾರಿಗಳು ಸ್ವಲ್ಪ ಲಾಭ ಕಾಣಬಹುದು. ಬಡ್ತಿ ಸಿಗದೆ ಬಹಳ ಕಾಲ ಆಗಿದ್ದರೆ ಇದೇ ಸಮಯದಲ್ಲಿ ಪ್ರಯತ್ನಿಸಿದರೆ ಸಾಧ್ಯವಾಗುತ್ತದೆ. ನಿರುದ್ಯೋಗಿಗಳು ಸ್ವಲ್ಪ ಪರಿಶ್ರಮ ಹಾಕಿ ಹುಡುಕಿದರೆ ಕೆಲಸ ಸಿಗುವ ಸಾಧ್ಯತೆಗಳಿವೆ.

 

ಧನು: ಜನ್ಮ ರಾಶಿ ಶನಿ ಆಲಸ್ಯವನ್ನು ತರುತ್ತಾನೆ

ನಿಮ್ಮ ರಾಶಿಯಲ್ಲಿಯೇ ಇರುವುದರಿಂದ ಅದನ್ನು ಜನ್ಮ ಶನಿ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಶರೀರದಲ್ಲಿ ಆಲಸ್ಯ ಹೆಚ್ಚಾಗುತ್ತದೆ. ಯಾವುದೇ ಕೆಲಸಗಳನ್ನೂ ಈ ಮೊದಲು ಮಾಡುತ್ತಿದ್ದಷ್ಟು ಶೀಘ್ರವಾಗಿ ಮಾಡಲು ಆಗುವುದಿಲ್ಲ. ಎಲ್ಲ ಮಾಡಬೇಕಾದ ಕೆಲಸಗಳನ್ನು ಮುಂದೂಡುವ ಮನಸಾಗುತ್ತದೆ.

ಅಷ್ಟೇ ಅಲ್ಲ, ಜನ್ಮ ಶನಿ ರೋಗಕಾರಕ ಆಗುವುದರಿಂದ ಸ್ವಲ್ಪ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಕೆಲವರಿಗೆ ಅನಾರೋಗ್ಯದಿಂದಾಗಿಯೇ ಉದ್ಯೋಗದಲ್ಲಿ ಹೆಚ್ಚಿನ ರಜೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲಿ ಗಮನಿಸ ಬೇಕಾದ ಅಂಶ ಎಂದರೆ ನಿಮಗೆ ಆಗುವ ಶಾರೀರಿಕ ಸಮಸ್ಯೆ ಇತರರಿಗೆ ತೋರಿಸಲು ಅಸಾಧ್ಯವಾಗಿರುತ್ತದೆ.

ಅದರ ಪರಿಣಾಮ ನಿಮಗೆ ಏನೂ ಆಗಿಲ್ಲ, ಸುಖಾಸುಮ್ಮನೆ ಸುಳ್ಳು ಹೇಳುತ್ತಿದ್ದೀರಿ ಎಂದು ಎಲ್ಲರಿಗೂ ಅನಿಸುತ್ತದೆ. ಹೊರಗೆ ಉಗುಳಲಾಗದ ಒಳಗೆ ನುಂಗಲಾಗದ ಬಿಸಿ ತುಪ್ಪದಂತೆ ಕೆಲವರ ಪರಿಸ್ಥಿತಿ. ನಿಮಗೆ ಸಹಾಯ ಮಾಡುತ್ತೇನೆ ಎಂದವರು ಕೈಗೆ ಸಿಗದೇ ಕಣ್ಣಿಗೂ ಕಾಣದಂತೆ ನಾಪತ್ತೆ ಆಗಿಬಿಡುತ್ತಾರೆ. ತಾವು ಕಷ್ಟದಲ್ಲಿ ಇದ್ದಾಗ ನಿಮ್ಮಿಂದ ಸಹಾಯ ಪಡೆದವರು ಸಹ ನಿಮ್ಮ ಸಹಾಯಕ್ಕೆ ಬರುವ ಸಾಧ್ಯತೆಗಳು ಕಡಿಮೆ. ನಿಮ್ಮ ಸಹಾಯಕ್ಕೆ ಬರಲಾಗದ ಸ್ಥಿತಿ ಕೆಲ ಸ್ನೇಹಿತರಿಗೆ ಬರುತ್ತದೆ.

 

ಮಕರ: ಸಾಡೇ ಸಾತ್ ಆರಂಭ, ಜೋಪಾನ

ಇದು ನಿಮಗೆ ಸಾಡೇ ಸಾತ್ ನ ಆರಂಭದ ಕಾಲ. ಆದುದರಿಂದ ಹಾಗೂ ಮೊದಲ 8-9 ತಿಂಗಳ ತನಕ ಗುರುಬಲ ಇರುವುದರಿಂದ ಅಡ್ಡ ಪರಿಣಾಮಗಳು ಅಥವಾ ಕಷ್ಟಗಳು ಆದಿಯಲ್ಲಿ ಕಂಡು ಬರುವುದು ತೀರಾ ಕಡಿಮೆ. ಆದರೆ ತಿಂಗಳು ಸಾಗಿದಂತೆ, ಮುಂದಿನ ವರುಷ ಬರುವಷ್ಟರಲ್ಲಿ ಕಷ್ಟಗಳ ಬಲೆಯಲ್ಲಿ ಸಿಲುಕುವ ಸಾಧ್ಯತೆಗಳು ಹೆಚ್ಚು ಇವೆ.

ಇಲ್ಲಿ ಬಲೆ ಎಂದು ಹೇಳಲು ಕಾರಣ ಆ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳುವುದು ಕಷ್ಟಸಾಧ್ಯ. ಉದ್ಯೋಗಕ್ಕೆ ರಾಜೀನಾಮೆ ಕೊಡದೇ, ಹೊಸದೊಂದು ವ್ಯಾಪಾರ ಆರಂಭಿಸದೇ ಹಾಸಿಗೆ ಇದ್ದಷ್ಟೇ ಕಾಲು ಚಾಚಿಕೊಂಡು ನಿತ್ಯ ಜೀವನ ಸಾಗಿಸಿದರೆ ಅರ್ಧ ಸಮಸ್ಯೆ ಪರಿಹಾರವಾದಂತೆಯೇ ಸರಿ.

ಆದರೆ ಸಾಡೇ ಸಾತ್ ನ ಆರಂಭದ ದಿನಗಳಲ್ಲಿ ಮೋಸಗಾರರ ಹಾಗೂ ಸುಳ್ಳು ಹೇಳುವವರ ಸಾಂಗತ್ಯ ಅರಿವಿಲ್ಲದಂತೆಯೇ ಆಗಿಬಿಡುತ್ತದೆ. ಕೆಟ್ಟವರ ಸಹವಾಸ ಗಾಣಕ್ಕೆ ಕೈ ಕೊಟ್ಟಂತೆ, ಹಿಂಪಡೆಯೋದು ಕಷ್ಟ. ಆದುದರಿಂದ ಬಹಳ ಎಚ್ಚರವಾಗಿರಬೇಕು. ವಿಶೇಷವಾಗಿ ಚಲನಚಿತ್ರದಲ್ಲಿ ಹೂಡಿಕೆ ಮಾಡುವ ಯೋಚನೆ ಇರುವವರು, ದೊಡ್ಡ ಪ್ರಮಾಣದಲ್ಲಿ ವ್ಯಾಜ್ಯದಲ್ಲಿ ಸಿಲುಕಿರುವ ಭೂಮಿಯಲ್ಲಿ ಹೂಡಿಕೆ ಮಾಡುವವರು, ಆಸ್ತಿಗಾಗಿ ಅಥವಾ ದೊಡ್ಡ ಪ್ರಕರಣಗಳಲ್ಲಿ ನ್ಯಾಯಾಲಯದ ಮೆಟ್ಟಿಲು ಹತ್ತ ಬಯಸುವವರು ಎಚ್ಚೆತ್ತುಕೊಳ್ಳಬೇಕು. ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಜಾತಕವನ್ನು ಒಮ್ಮೆ ಪರಿಶೀಲಿಸಿಕೊಳ್ಳಬೇಕು.

 

ಕುಂಭ: ಕೆಲಸ ಆಗುತ್ತೆ, ಲಾಭ ಸಿಗೋದು ತಡವಾಗುತ್ತೆ

ಶನಿ ಗ್ರಹ ಹನ್ನೊಂದನೇ ಮನೆಗೆ ಪ್ರವೇಶ ಮಾಡುವುದರಿಂದ ಶುಭ ಹಾಗೂ ಅಶುಭ ಈ ಎರಡೂ ಫಲಗಳನ್ನು ಹೇಳಬಹುದು. ಕಾರಣ ರಾಶ್ಯಾಧಿಪತಿ ಲಾಭಕ್ಕೆ ಬಂದಾಗ ನಿಮ್ಮ ಕೆಲಸ ಕಾರ್ಯಗಳೆಲ್ಲವೂ ಸಾಂಗವಾಗಿ ಮುಗಿಯುತ್ತದೆ. ಆದರೆ ಸಮಸ್ಯೆ ಅಂದರೆ ಕೆಲಸ ಪೂರ್ಣ ಆದುದರಿಂದಾಗಿ ನಿಮ್ಮ ಕೈ ಸೇರಬೇಕಾದ ಲಾಭ ಮಾತ್ರ ಸಿಗುವುದು ಅತ್ಯಂತ ನಿಧಾನ.

ಇದರಿಂದಾಗಿ ಸ್ವಲ್ಪ ಸಮಸ್ಯೆಗಳನ್ನು ಎದುರಿಸ ಬೇಕಾಗಿಬರುತ್ತದೆ. ಅದರಲ್ಲಿಯೂ ಇನ್ನೊಬ್ಬರೊಂದಿಗೆ ಸೇರಿ ವ್ಯವಹಾರಗಳನ್ನು ಮಾಡುತ್ತಿದ್ದಲ್ಲಿ ಇಬ್ಬರ ಮಧ್ಯೆ ಜಗಳ ಹಾಗೂ ಮನಸ್ತಾಪಗಳು ಸಂಭವಿಸುತ್ತವೆ. ಆದರೆ ಗಮನಿಸಬೇಕಾದ ಅಂಶ ಎಂದರೆ ಶನಿ ಗ್ರಹದಿಂದಾಗಿ ನಿಮಗೆ ಯಾವುದೇ ಆರೋಗ್ಯ ಸಮಸ್ಯೆ ಕಾಡುವುದಿಲ್ಲ. ಸಂತಸ ನೀಡುವ ಕೆಲ ಘಟನೆಗಳು ಈ ವರ್ಷಾಂತ್ಯ ಅಥವಾ ಮುಂದಿನ ವರುಷ ನೀವು ಕಾಣಬಹುದು. ಪ್ರಯತ್ನಿಸಿ, ಪಡೆದರೆ ಮಾತ್ರ ಮಾನಸಿಕ ನೆಮ್ಮದಿ ಖಂಡಿತಾ ಸಿಗುತ್ತದೆ.

 

ಮೀನ: ಸರಿ-ತಪ್ಪುಗಳ ಆಯ್ಕೆ ಸರಿಯಾಗಿದ್ದರೆ ಬದುಕು ಬೊಂಬಾಟ್

ಶನಿ ಗ್ರಹ ಕರ್ಮಸ್ಥಾನದಲ್ಲಿ ಬರುವುದರಿಂದ ಸ್ವಲ್ಪ ಪ್ರಯತ್ನಿಸಿದರೂ ರಾಜಕೀಯದಲ್ಲಿ ಇರುವವರಿಗೆ ಅಧಿಕಾರ ಪ್ರಾಪ್ತಿ ಆಗುತ್ತದೆ. ಬಾಣಂತಿ ತಾಯಂದಿರಿಗೆ ಎದೆ ಹಾಲಿನ ಕೊರತೆ ಆಗಿ, ಮಗುವಿಗೆ ಬೇರೆ ವ್ಯವಸ್ಥೆ ಮಾಡ ಬೇಕಾಗಬಹುದು. ಗಮನಿಸಬೇಕಾದ ಅಂಶ ಎಂದರೆ ನಿಮ್ಮಲ್ಲಿ ಸ್ವಸಾಮರ್ಥ್ಯ ಹೆಚ್ಚುತ್ತದೆ. ಆರಂಭದ ದಿನಗಳಲ್ಲಿ ಹೊಸ ಸ್ನೇಹ ವರ್ಗ ಪ್ರಾಪ್ತಿ ಇದೆ. ನಾಯಕನ ಗುಣಗಳು ಆ ಭಾವಗಳು ತಾನಾಗಿಯೇ ನಿಮ್ಮಲ್ಲಿ ಹೆಚ್ಚಾಗುತ್ತದೆ.

ನಿಮ್ಮನ್ನು ಗುರುತಿಸುವ ಹಾಗೂ ಗಮನಿಸುವ ವ್ಯಕ್ತಿಗಳು ಹೆಚ್ಚಾಗಬಹುದು. ಆದರೆ ನೀವು ಇದೇ ಸಮಯದಲ್ಲಿ ಚಿಕ್ಕ ತಪ್ಪು ಮಾಡಿದವರಿಗೂ ದೊಡ್ಡದಾಗಿ ಶಿಕ್ಷಿಸುತ್ತೀರಿ! ಆದರೆ ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಮಾನವೀಯತೆ ಮೆರೆಯುತ್ತೀರಿ. ಈ ಥರದ ದ್ವಿಸ್ವಭಾವದ ಗುಣ ಸ್ವಲ್ಪ ಹೆಚ್ಚಾಗುತ್ತದೆ.

ವ್ಯಾಪಾರಿಗಳಿಗೆ ಲಾಭವಿದೆ. ಅದರಲ್ಲಿಯೂ ಕಬ್ಬಿಣದ ವ್ಯಾಪಾರಿಗಳಿಗೆ ಹೆಚ್ಚು ಲಾಭವಿದೆ. ಇಲ್ಲಿ ಚಿಂತಿಸ ಬೇಕಾದ ವಿಷಯ ಅಂದರೆ ನಿಮ್ಮ ತಂದೆ- ತಾಯಿಯ ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆಗಳಾಗಬಹುದು. ಅದರಲ್ಲಿಯೂ ತಂದೆ ಹಾಗೂ ನಿಮ್ಮ ಮಧ್ಯೆ ಮನಸ್ತಾಪ ಆಗಬಹುದು. ಇಲ್ಲ ಇಬ್ಬರೂ ಒಟ್ಟಿಗೆ ಇರಲು ಅಸಾಧ್ಯವಾಗುತ್ತದೆ. ಅನಿವಾರ್ಯವಾಗಿ ಬೇರೆ ಆಗುತ್ತಾ ಬರಬಹುದು.

ವಿವಾಹಿತರಿಗೆ ಬಾಳಸಂಗಾತಿಯೊಂದಿಗೆ ಚಿಕ್ಕ- ಪುಟ್ಟ ವೈಮನಸ್ಸು ಬರಬಹುದು. ಬೇಡದ ಸಂಬಂಧಗಳನ್ನು ಮನಸ್ಸು ಬಯಸಬಹುದು. ನಿಮ್ಮ ಭವಿಷ್ಯ ಚಿಂತನಾ ವಿಧಾನದಲ್ಲಿ ಅಡಕವಾಗಿ ಇರುವುದರಿಂದ ನೀವೇ ತಪ್ಪು- ಸರಿಗಳನ್ನು ತಿಳಿದು ತಿದ್ದಿಕೊಂಡು ಸುಖವಾಗಿ ಜೀವಿಸುವತ್ತ ಗಮನಹರಿಸಿದರೆ ಉತ್ತಮ.

 

ಪರಿಹಾರಗಳು

ಹವನ ಪರಿಹಾರ: 10,000 ಸಂಖ್ಯೆಯಲ್ಲಿ ವೇದೋಕ್ತ ಶನಿ ಮಂತ್ರದಿಂದ ಜಪ ಮಾಡಿಸಿ ನಂತರ ಅದರ ಹತ್ತೇ ಒಂದು ಭಾಗದಷ್ಟು ಪ್ರಮಾಣದಲ್ಲಿ ಕೃಸರಾನ್ನ ದ್ರವ್ಯ ಹಾಗೂ ಶಮೀ ಸಮಿಧ, ಆಜ್ಯದಲ್ಲಿ ಶನಿ ಶಾಂತಿ ಹವನ ಮಾಡಬೇಕು. ಆ ನಂತರ ಹವನ ದಶಾಂಶ ತರ್ಪಣ, ಅದೇ ದಶಾಂಶ ಪ್ರಮಾಣದಲ್ಲಿ ಪ್ರೋಕ್ಷಣೆ ಹಾಗೂ ಅಭಿಮಂತ್ರಿತ ತೀರ್ಥ ಪ್ರಾಶನ ಮಾಡಿ.
ದಾನ: ಕಬ್ಬಿಣದ ಪಾತ್ರೆಯಲ್ಲಿ ಕರಿ ಎಳ್ಳು ಹಾಗೂ ಶುದ್ಧವಾದ ಎಳ್ಳೆಣ್ಣೆ ದಾನ ಮಾಡಿ.
ಸ್ತೋತ್ರ ಪಠಣ: ನಿತ್ಯ ಶನಿ ಅಷ್ಟೋತ್ತರ ಹಾಗೂ ದತ್ತಾತ್ರೇಯ ವಜ್ರ ಕವಚ ಸ್ತೋತ್ರ ಪಠಣ
ವ್ರತ: ಶನೈಶ್ಚರ ವ್ರತ ಹಾಗೂ ಲಕ್ಷ್ಮೀ ಸತ್ಯನಾರಾಯಣ ವ್ರತ ಶ್ರದ್ಧೆಯಿಂದ ಮಾಡಿ
ರತ್ನ ಧಾರಣೆ: ಅಭಿಮಂತ್ರಿತ ವ್ಯಾಘ್ರ ನೇತ್ರ ರತ್ನಗಳ ಮಾಲೆ ಹಾಗೂ ಜಲ ರತ್ನವನ್ನು ಉಂಗುರದಲ್ಲಿ ಧಾರಣೆ

ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಭೇಟಿಗೆ

ಯಾವುದೇ ಪರಿಹಾರ ಸಂಬಂಧಿ ವಿಚಾರಗಳಿಗೆ ವೈಯಕ್ತಿಕವಾಗಿ ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಅವರನ್ನು ಭೇಟಿಯಾಗಲು ಮುಂಚಿತವಾಗಿ ಸಮಯ ನಿಗದಿಪಡಿಸಿಕೊಳ್ಳಿ. ಸಂಪರ್ಕ ಸಂಖ್ಯೆ-9845682380.

English summary
Saturn transit impact on zodiac signs : Lord Shani does good and bad to the people depending upon the movement of the planets. Bottom line is we should believe him and face the situation however it comes with courage. So, let's see what is the impact of Shani on each zodiac sign.
Please Wait while comments are loading...