ದ್ವಾದಶ ರಾಶಿಗಳ ಮೇಲೆ ವಕ್ರೀ ಶನಿಯ ಪರಿಣಾಮ ಏನು?

ಮುಂದಿನ ಜೂನ್ 21ರಂದು ಶನಿ ವಕ್ರಿಯಾಗಿ ವೃಶ್ಚಿಕ ರಾಶಿ ಪ್ರವೇಶ ಆಗುತ್ತದೆ. ಅಲ್ಲಿಂದ ಅಕ್ಟೋಬರ್ 25ರವರೆಗೆ ಅಲ್ಲೇ ಇರುತ್ತದೆ. ಇದರಿಂದ ದ್ವಾದಶ ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಲು ಈ ಲೇಖನ ಓದಿ

Written by: ಪಂಡಿತ್ ವಿಠ್ಠಲ ಭಟ್
Subscribe to Oneindia Kannada

ಈ ವರ್ಷದ ಜನವರಿಯ 26 ಶನಿ ಗ್ರಹ ವೃಶ್ಚಿಕ ರಾಶಿಯಿಂದ ಧನು ರಾಶಿಗೆ ಸಂಚಾರ ಆಗಿರುವುದು ಎಲ್ಲರಿಗೂ ಅರಿವಿಗೆ ಬಂದಿದೆ. ಕಾರಣ ಈ ಸಂಚಾರದಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟ ಪ್ರಧಾನ ರಾಶಿಗಳು ಅಂದರೆ ಮೇಷ ಹಾಗೂ ಕರ್ಕಾಟಕ ರಾಶಿಯವರು,

ವೃಶ್ಚಿಕವು ಮೇಷಕ್ಕೆ ಎಂಟನೇ ಹಾಗೂ ಕರ್ಕಾಟಕಕ್ಕೆ ಐದನೇ ರಾಶಿ ಆಗುತ್ತದೆ. ಆ ಕಾರಣದಿಂದ ವೃಶ್ಚಿಕ ರಾಶಿಯಲ್ಲಿ ಶನಿ ಇದ್ದ ಎರಡೂವರೇ ವರುಷ ತನಕ ಮೇಷ ರಾಶಿಯವರು ಅಷ್ಟಮ ಹಾಗೂ ಕರ್ಕಾಟಕ ರಾಶಿಯವರು ಪಂಚಮ ಶನಿಯ ಪ್ರಭಾವವನ್ನು ಅನುಭವಿಸಿದ್ದಾರೆ.

ಈಗ ಜನವರಿ 26ರ ನಂತರ ಧನು ರಾಶಿಗೆ ಶನಿ ಸಂಚಾರ ಆದ ನಂತರ ಸ್ವಲ್ಪ ಚೇತರಿಕೆ ಕಂಡಂತೆ ಆಗಿರುತ್ತದೆ. ಆದರೂ ಕೈಗೆ ಬಂದದ್ದು ಬಾಯಿಗೆ ಬಂದಿಲ್ಲ ಅನ್ನುವಂತೆ ಇರುತ್ತದೆ. ಈ ಎರಡು ರಾಶಿಗಳ ಪರಿಸ್ಥಿತಿಗೆ ಕಾರಣ ಆಗಿರುವುದು ಮತ್ತದೇ ಶನಿ ಗ್ರಹ ! ಆಶ್ಚರ್ಯ ಆದರೂ ಇದು ಸತ್ಯ.[ಜ.26ಕ್ಕೆ ಧನು ರಾಶಿಗೆ ಶನಿ ಪ್ರವೇಶ: ಯಾವ ರಾಶಿಗೆ ಏನು ಫಲ, ಪ್ರಭಾವ?]

ಶನೈಶ್ಚರ ಪುನಃ ವೃಶ್ಚಿಕ ರಾಶಿಗೆ ಹಿಂತಿರುಗುತ್ತಿದ್ದಾನೆ ! ಇದೇ ವರ್ಷದ ಜೂನ್ 21ರಂದು ವಕ್ರಿಯಾಗಿ ವೃಶ್ಚಿಕ ರಾಶಿಯನ್ನು ಪ್ರವೇಶಿಸುವ ಶನೈಶ್ಚರನು ನಾಲ್ಕು ತಿಂಗಳ ಕಾಲ ಅಂದರೆ ಅಕ್ಟೋಬರ್ 25ರ ತನಕ ಅದೇ ರಾಶಿಯಲ್ಲಿಯೇ ನೆಲೆಸಿರುತ್ತಾನೆ. ಇದರ ಅರ್ಥ ಅಂದರೆ ಮೇಷ ರಾಶಿಯವರಿಗೆ ಅಷ್ಟಮ ಶನಿ ಹಾಗೂ ಕರ್ಕಾಟಕ ರಾಶಿಯವರಿಗೆ ಪಂಚಮ ಶನಿಯ ಪ್ರಭಾವ ಮತ್ತೆ ನಾಲ್ಕು ತಿಂಗಳ ಮಟ್ಟಿಗೆ ಆದರೂ ಇರುತ್ತದೆ.

ಈ ನಾಲ್ಕು ತಿಂಗಳ ಶನಿ ವಕ್ರೀ ಚಲನೆಯಿಂದಾಗಿ ದ್ವಾದಶ ರಾಶಿಗಳ ಮೇಲಿನ ಪ್ರಭಾವ ಹೇಗಿರುತ್ತದೆ ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಮೇಷ

ಮೇಷ ರಾಶಿಯವರು ಈ ನಾಲ್ಕು ತಿಂಗಳು ಬಹಳ ಎಚ್ಚರಿಕೆಯಿಂದ ಇರಬೇಕು. ಅನಿವಾರ್ಯ ಇಲ್ಲದಿದ್ದರೆ ದೂರ ಪ್ರಯಾಣ ವರ್ಜಿಸಿ. ನೀವು ತೆಗೆದುಕೊಳ್ಳುತ್ತಿರುವ ಔಷಧಿಗಳತ್ತ ಗಮನ ಹರಿಸಿ. ಸೈಡ್ ಎಫೆಕ್ಟ್ ಹೆಚ್ಚು ಇರುವ ಔಷಧಿಗಳನ್ನು ವರ್ಜಿಸಿ. ಆಯುರ್ವೇದ ಹಾಗೂ ಯೋಗ ಧ್ಯಾನಗಳತ್ತ ನಿಮ್ಮ ಪ್ರಯತ್ನವಿದ್ದರೆ ಉತ್ತಮ. ಈ ನಾಲ್ಕು ತಿಂಗಳಲ್ಲಿ ಆಗುವ ಯಾವುದೇ ಚಿಕ್ಕ- ಪುಟ್ಟ ಅಆರೋಗ್ಯ ವ್ಯತ್ಯಾಸಗಳನ್ನೂ ಅಸಡ್ಡೆ ಮಾಡದೆ ತಕ್ಷಣ ವೈದ್ಯರ ಸಲಹೆ ಪಡೆದರೆ ಉತ್ತಮ.

ವೃಷಭ

ಸಮಸ್ಯೆಗಳಿಗೆ ತಾತ್ಕಾಲಿಕ ತಡೆ ಬೀಳಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯ ಹಾಗೂ ಸಂತಾನಾಸಕ್ತರಿಗೆ ಸಂತಾನ ಭಾಗ್ಯವಿದೆ.

ಮಿಥುನ

ಬಾಳಸಂಗಾತಿ ಅಥವಾ ಸ್ನೇಹಿತರೊಡನೆ ಇದ್ದ ಮನಸ್ತಾಪಗಳು ದೂರ ಆಗಲಿವೆ, ಸುಖ ಹಾಗೂ ಸೌಕರ್ಯಗಳು ವೃಧ್ಧಿಸಲಿವೆ.

ಕರ್ಕಾಟಕ

ಆರ್ಥಿಕ ಹಾಗೂ ಉದ್ಯೋಗ ಸಂಬಂಧಿತ ಬಾಧೆಗಳು ಕಾಡಬಹುದು. ಹಣ ಕೈಯಲ್ಲಿ ನಿಲ್ಲದೆ ಪರದಾಟ ಆಗ ಬಹುದು. ನಿಮ್ಮ ಹಣದ ಹೂಡಿಕೆ ವಿಚಾರದಲ್ಲಿ ಸಹ ಬಹಳ ಎಚ್ಚರ ಆವಶ್ಯ. ಯಾರಿಗೂ ಸಾಲ ಕೊಡಲು ಅಥವಾ ಕೊಡಿಸಲು ಹೋಗಬೇಡಿ. ಇನ್ನು ನೀವೇ ಸಾಲ ಮಾಡುವ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ ಆದರೆ ಅದು ಸಣ್ಣ ಪ್ರಮಾಣದ ಸಾಲ ಆಗಿದ್ದರೆ ಸಮಸ್ಯೆ ಇಲ್ಲ. ನಿಮ್ಮ ಸ್ಥಿತಿಗತಿಗಳನ್ನು ಹೋಲಿಸಿದಾಗ ಅದು ದೊಡ್ಡ ಪ್ರಮಾಣದ ಸಾಲ ಆಗುತ್ತದೆ ಎಂದಾದಲ್ಲಿ ಅಕ್ಟೋಬರ್ ತಿಂಗಳು ಕಳೆದು ಶನಿ ಪುನಃ ಧನು ರಾಶಿಗೆ ಹೋಗುವ ತನಕ ಕಾದು, ಆ ನಂತರ ಪರಿಸ್ಥಿತಿ ಅವಲೋಕಿಸಿ ಮುನ್ನಡೆದರೆ ಉತ್ತಮ.

ಸಿಂಹ

ಕೊಟ್ಟ ಸಾಲಗಳನ್ನು ಹಿಂಪಡೆಯಲು ಒಂದು ಸುವರ್ಣಾವಕಾಶ. ಹೆಚ್ಚಿನ ಬಡ್ಡಿಯ ಆಸೆಗೆ ಬಿದ್ದು ಈ ಅವಕಾಶವನ್ನು ಬಿಡಬೇಡಿ. ನಿಮ್ಮ ಮೇಲೆ ಇಲ್ಲಸಲ್ಲದ ಅಪವಾದಗಳು ಬಂದಿದ್ದಲ್ಲಿ ಅವೆಲ್ಲ ಸುಳ್ಳು ಎಂದು ಸಾಧಿಸಲು ಸುಸಮಯ.

ಕನ್ಯಾ

ನಿಮ್ಮ ಅಣ್ಣ -ತಮ್ಮ ಹಾಗೂ ಅಕ್ಕ- ತಂಗಿ ಇತ್ಯಾದಿ ವರ್ಗದವರ ಜೊತೆಗೆ ಮನಸ್ತಾಪ ಆಗಬಹುದು. ಉಳಿದಂತೆ ಈ ನಾಲ್ಕೂ ತಿಂಗಳು ಶುಭಪ್ರದವಾಗಿದೆ.

ತುಲಾ

ಏಳೂವರೆ ವರ್ಷದ ಸಾಡೇ ಸಾತ್ ಮುಗಿಯಿತು, ಇನ್ನು ತೊಂದರೆ ಇಲ್ಲ ಎಂದು ತಿಳಿದು ನೆಮ್ಮದಿಯಿಂದ ಇದ್ದಿರಿ. ಆದರೆ ಈ ನಾಲ್ಕು ತಿಂಗಳಲ್ಲಿ ಮತ್ತೆ ಚಿಕ್ಕ- ಪುಟ್ಟ ಸಮಸ್ಯೆಗಳು ಪುನರಾವರ್ತನೆ ಆಗಬಹುದು. ಆದರೆ ನಿಮಗೆ ಇರುವ ಅತಿ ಉತ್ತಮ ಉಪಾಯ ಎಂದರೆ ತಾಳ್ಮೆ! ಹೌದು ತಾಳ್ಮೆಯಿಂದ ಹೇಗಾದರೂ ಮಾಡಿ ಈ ನಾಲ್ಕು ತಿಂಗಳು ಕಳೆದುಬಿಡಿ. ಅಷ್ಟರಲ್ಲಿ ಆ ಮಧ್ಯ ಸಮಯದಲ್ಲಿ ಏನೂ ಸಮಸ್ಯೆ ಮಾಡಿಕೊಳ್ಳಬೇಡಿ. ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಇನ್ನೂ ಹೇಳಬೇಕೆಂದರೆ ಯಾವುದೇ ದೊಡ್ಡ ತೀರ್ಮಾನಗಳನ್ನು ತೆಗೆದುಕೊಳ್ಳದಿರುವುದು ಉತ್ತಮ.

ವೃಶ್ಚಿಕ

ಆರೋಗ್ಯ ಬಾಧೆಗಳು ಮರುಕಳಿಸಬಹುದು. ಅದರಲ್ಲಿಯೂ ಬೆನ್ನು ನೋವು ಅಥವಾ ಜ್ವರ ಬಾಧೆ ಹೆಚ್ಚಾಗಬಹುದು.

ಧನು

ಆಲಸ್ಯ ಹೆಚ್ಚಾಗಬಹುದು. ಮಾಡುತ್ತಿರುವ ಕೆಲಸ- ಕಾರ್ಯಗಳಲ್ಲಿ ಅಡೆತಡೆಗಳು ಹೆಚ್ಚಾಗುತ್ತಿವೆ ಅನಿಸುತ್ತದೆ. ಸುಲಭವಾಗಿ, ಸುಲಲಿತವಾಗಿ ಯಾವುದೇ ಚಿಕ್ಕ ಅಥವಾ ದೊಡ್ಡ ಕಾರ್ಯಗಳು ಮಾಡಲು ಆಗುತ್ತಿಲ್ಲ ಎಂಬ ಭಾವನೆ ಬರುತ್ತದೆ.

ಮಕರ

ಈ ವರ್ಷದ ಜನವರಿ 26ರ ನಂತರ ಯಾವುದಾದರೂ ತಪ್ಪು ಮಾಡಿ ಸಿಕ್ಕಿಹಾಕಿಕೊಂಡಿದ್ದಲ್ಲಿ, ಸಮಸ್ಯೆ ಮಾಡಿಕೊಂಡಿದ್ದಲ್ಲಿ ಅದು ನಿಮಗೆ ಸಾಡೇಸಾತ್ ಪ್ರಾರಂಭ ಆಗಿರುವುದರಿಂದ ಎಂಬ ಸ್ಪಷ್ಟ ಇದ್ದಲ್ಲಿ ಈ ನಾಲ್ಕು ತಿಂಗಳಲ್ಲಿ ತಪ್ಪುಗಳನ್ನು ತಿದ್ದಿಕೊಳ್ಳಲು ಹಾಗೂ ಮತ್ತೆ ತಪ್ಪು ಮಾಡದಂತೆ ಎಚ್ಚರವಹಿಸಲು ಬಂಗಾರದಂಥ ಸಮಯ. ಆದ್ದರಿಂದ ಈ ನಾಲ್ಕು ತಿಂಗಳ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು.

ಕುಂಭ

ಭೂ ವ್ಯವಹಾರಗಳು ಈ ನಾಲ್ಕು ತಿಂಗಳು ಸಂಪೂರ್ಣ ಸ್ಥಗಿತ ಆದಂತೆ ಭಾಸ ಆಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಬರಬೇಕಿದ್ದ ಸವಲತ್ತುಗಳು ಮುಂದೂಡುತ್ತವೆ.

ಮೀನ

ಶುಭ ಕಾರ್ಯಗಳಲ್ಲಿ ತೊಡಕು ಉಂಟಾಗಬಹುದು. ಅದೃಷ್ಟ ಚೆನ್ನಾಗಿ ಇದ್ದದ್ದು ಇದ್ದಕ್ಕಿದ್ದಂತೆ ಏನಾಯಿತು, ಯಾಕೆ ಎನ್ನುವ ಪ್ರಶ್ನೆಗಳು ಉದ್ಭವಿಸುತ್ತವೆ.

ವಕ್ರ ಶನಿಯ ಫಲ ಉಚ್ಚ

ಇನ್ನು ಈ ವಾಪಸಾತಿಯಿಂದಾಗಿ ಎಷ್ಟು ಸಮಸ್ಯೆ ಎಂದು ನೀವು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಈ ಸಂಚಾರದ ವಿಚಾರದಲ್ಲಿ ನಿಮ್ಮ ಗಮನ ಸೆಳೆದದ್ದು ನಿಮ್ಮನ್ನು ಎಚ್ಚರಿಸಲು ಅಷ್ಟೇ. ಇಲ್ಲಿ ಸಂತಸದ ವಿಚಾರ ಅಂದರೆ ಶಾಸ್ತ್ರದಲ್ಲಿ "ವಕ್ರಸ್ಯ ಉಚ್ಚಂ ಫಲಂ" ಎಂಬ ವಾಕ್ಯದ ಅನ್ವಯ ಈ ನಾಲ್ಕು ತಿಂಗಳು ವಕ್ರಗತಿಯ ಸಮಯದಲ್ಲಿ ಶನಿ ಉತ್ತಮ ಫಲವನ್ನು ಸಹ ನೀಡುತ್ತಾನೆ. ಅದನ್ನೇ ಎಷ್ಟೋ ಹಿರಿಯ ಜ್ಯೋತಿಷಿಗಳು ಸಹ ಸಮರ್ಥಿಸುತ್ತಾರೆ. ಆದರೂ ನಮ್ಮ ಎಚ್ಚರಿಕೆಯಲ್ಲಿ ಇದ್ದರೆ ಅದುವೇ ಜಾಣತನ.

English summary
Saturn retrograde transit impact on zodiac signs explain by well known astrologer Pandit Vittal Bhat. Saturn again transit in Scorpio from June 21st, 2017 to October 25th.
Please Wait while comments are loading...