ಏಪ್ರಿಲ್ 2017 - ಕ್ಯಾಲೆಂಡರ್ ಮೇಲೆ ತಿಂಗಳ ರಾಶಿ ಭವಿಷ್ಯ

ಚಂದ್ರನ ಚಲನೆಯನ್ನು ಆಧಿರಿಸಿ ರೂಪಿಸಲಾಗಿರುವ ಈ ಕ್ಯಾಲೆಂಡರನ್ನು ನೋಡಿ ಆಯಾ ದಿನ ಪ್ರೇಮ ಪರಿಣಯ ಎಂದು ಹೇಗೆ, ಮನೆ ಕೊಳ್ಳಲು ಯಾವ ದಿನ ಸೂಕ್ತ, ಎಂದು ಧನ ಪ್ರಾಪ್ತಿಯಾಗುತ್ತದೆ, ಯಾವ ದಿನ ಖಿನ್ನತೆ ಆವರಿಸುತ್ತದೆ ಎಂಬ ಬಗ್ಗೆ ಬಗ್ಗೆ ತಿಳಿಯಬಹುದು.

Written by: ಪಂಡಿತ್ ಅನುಜ್ ಕೆ. ಶುಕ್ಲಾ
Subscribe to Oneindia Kannada

ಜ್ಯೋತಿಷ್ಯ ಕ್ಯಾಲೆಂಡರನ್ನು ಖ್ಯಾತ ಜ್ಯೋತಿಷಿ ಪಂಡಿತ ಅನುಜ್ ಕೆ. ಶುಕ್ಲಾ ಅವರು ಪ್ರಿಲ್ 2017ರ ಪಂಚಾಂಗದ ಆಧಾರದ ಮೇಲೆ ಆಯಾ ರಾಶಿಗೆ ಅನುಗುಣವಾಗಿ ರೂಪಿಸಿದ್ದಾರೆ. ನಿಮ್ಮ ರಾಶಿಗೆ ತಕ್ಕಂತೆ ಅಂದಿನ ದಿನ ನಿಮ್ಮ ಜೀವನದಲ್ಲಿ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಇಂದು ಮಾತ್ರವಲ್ಲ, ನಾಳೆ, ನಾಡಿದ್ದು ಅಥವಾ ಮುಂದಿನ ದಿನ ಹೇಗಿರುತ್ತದೆಂದು ಕೂಡ ಈ ಕ್ಯಾಲೆಂಡರ್ ಮುಖಾಂತರ ತಿಳಿಯಬಹುದು.

ವಾರ ಭವಿಷ್ಯ ಅಥವಾ ತಿಂಗಳ ಭವಿಷ್ಯ ಒಂದು ಬಾರಿ ನೋಡಿ ಮರೆತುಬಿಟ್ಟಿರುತ್ತೇವೆ. ನಾವು ಅವುಗಳನ್ನು ಮರೆತರೂ ಗ್ರಹ, ನಕ್ಷತ್ರ ಮತ್ತು ಕಾಲಚಕ್ರಗಳನ್ನು ನಮ್ಮನ್ನು ಮರೆಯುವುದಿಲ್ಲ. ಭಾರತದ ಪ್ರಾಚೀನ ಜ್ಯೋತಿಷ್ಯಶಾಸ್ತ್ರ ನಮ್ಮ ಜೀವನದೊಂದಿಗೆ ಯಾವತ್ತೂ ಕೂಡಿಕೊಂಡಿರುತ್ತದೆ. ನಿಮ್ಮ ಜೀವನವನ್ನು ಸರಳಗೊಳಿಸುವ ಉದ್ದೇಶದಿಂದ ಜ್ಯೋತಿಷ್ಯ ಕ್ಯಾಲೆಂಡರನ್ನು ಇಲ್ಲಿ ಸಾದರಪಡಿಸುತ್ತಿದ್ದೇವೆ. ನಮ್ಮ ಭವಿಷ್ಯಫಲ ಏನಿದೆ ಎಂದು ಇಲ್ಲಿ ಖುದ್ದಾಗಿ ನಾವೇ ನೋಡಿಕೊಳ್ಳಬಹುದು.

ಚಂದ್ರನ ಚಲನೆಯನ್ನು ಆಧಿರಿಸಿ ರೂಪಿಸಲಾಗಿರುವ ಈ ಕ್ಯಾಲೆಂಡರನ್ನು ನೋಡಿ ಆಯಾ ದಿನ ಪ್ರೇಮ ಪರಿಣಯ ಎಂದು ಹೇಗೆ, ಮನೆ ಕೊಳ್ಳಲು ಯಾವ ದಿನ ಸೂಕ್ತ, ಎಂದು ಧನ ಪ್ರಾಪ್ತಿಯಾಗುತ್ತದೆ, ಯಾವ ದಿನ ಖಿನ್ನತೆ ಆವರಿಸುತ್ತದೆ, ಎಂದು ಸಂತಸದ ಬುಗ್ಗೆ ಉಕ್ಕುತ್ತದೆ ಮುಂತಾದ ವಿಷಯಗಳ ಬಗ್ಗೆ ತಿಳಿಯಬಹುದು. ಎಲ್ಲ ಸಂಗತಿಗಳನ್ನು ಪಂಡಿತರು ವಿವಿಧ ಚಿಹ್ನೆಗಳ ಮುಖಾಂತರ ಅತ್ಯಂತರ ಸರಳವಾಗಿ ತಿಳಿಸಿಕೊಡುತ್ತಾರೆ.

ಯಾವ ಚಿಹ್ನೆ ಏನು ಹೇಳುತ್ತದೆ?

ಹೃದಯ - ಪ್ರೀತಿ ಪ್ರೇಮ ಪ್ರಣಯಕ್ಕೆ ಆ ದಿನ ಅತ್ಯಂತ ಸುದಿನವಾಗಿರುತ್ತದೆ.
ಮಿಂಚು - ಆ ದಿನ ನಿಮ್ಮ ಜೀವನದಲ್ಲಿ ಆಪತ್ತು ಬರಬಹುದು.
ಮನೆ - ಮನೆ ಅಥವಾ ಅಂಗಡಿಯನ್ನು ಆ ದಿನ ಕೊಳ್ಳಬಹುದು ಅಥವಾ ಮಾರಬಹುದು.
ಮುಗುಳ್ನಗೆ - ಆ ದಿನ ನಿಮ್ಮ ಜೀವನದಲ್ಲಿ ಸಂತಸ ಬರಬಹುದು.
ಚಿಂತೆ - ಯಾವುದೋ ವಿಷಯದಲ್ಲಿ ಚಿಂತೆ ಅಥವಾ ಖಿನ್ನತೆ ಆವರಿಸಬಹುದು.
ನಕ್ಷತ್ರ - ಆ ದಿನ ಜೀವನದಲ್ಲಿ ಸೌಭಾಗ್ಯದ ದಿನವಾಗಿರುತ್ತದೆ.
ನಾಣ್ಯ - ನಾಣ್ಯ ಇದ್ದ ದಿನ ಧನ ಲಾಭ ಆಗುವ ಸಂಭವನೀಯತೆ ಇರುತ್ತದೆ.

ಪ್ರತಿದಿನ ಬಿಡುವು ಸಿಕ್ಕಾಗಲೆಲ್ಲ ಈ ಕ್ಯಾಲೆಂಡರನ್ನು ನೋಡಬೇಕೆಂದಿದ್ದರೆ ಈ ಪುಟವನ್ನು ಬುಕ್‌ಮಾರ್ಕ್ ಮಾಡಿಟ್ಟುಕೊಳ್ಳಿ.

ಮೇಷ

ಹಣ್ಣು ಕೊಳೆತ ವಾಸನೆ ಮೂಗಿಗೆ ಬಡಿಯುತ್ತಿದ್ದಂತೆ ಅದನ್ನು ಬಿಸಾಕಿಬಿಡುವುದು ಜಾಣತನ. ಹಾಗೆಯೆ, ಹುಚ್ಚು ನಾಯಿಗಳಿಂದ ದೂರವಿರುವುದು ಕೂಡ. ಕೆಲ ಅವಿವೇಕಿಗಳು ನಿಮ್ಮ ನೆಮ್ಮದಿ ಹಾಳು ಮಾಡಬಹುದು ಅಥವಾ ನಿಮ್ಮನ್ನು ಕೆಣಕಲು ಯತ್ನಿಸಬಹುದು. ಹೌದಾ, ಎಲ್ಲವೂ ನಿಮ್ಮಂತೆಯೇ ಆಗಲಿ ಎಂದು ಸುಮ್ಮನಿದ್ದುಬಿಡುವುದು ನೀವು ಮಾಡಬೇಕಾಗಿರುವ ಮೊದಲ ಕೆಲಸ. ಇದರಿಂದ ನಿಮ್ಮ ಸ್ವಾಭಿಮಾನಕ್ಕೇನು ಪೆಟ್ಟು ಬೀಳುವುದಿಲ್ಲ. ಯಾವುದಕ್ಕೂ ಅತಿಯಾದ ಉತ್ಸಾಹ ತರವಲ್ಲ. ಆತ್ಮೀಯರಿಂದಲೇ ಅವಮಾನ ಮಾಡಿಸಿಕೊಳ್ಳುವುದಕ್ಕಿಂತ ಗೌರವ ಸಿಗದಿದ್ದರೂ ಚಿಂತೆಯಿಲ್ಲ ಅಗೌರವಕ್ಕೆ ಪಾತ್ರರಾಗದಿರುವುದು ಉತ್ತಮ. ಇನ್ನು ಎಲ್ಲವೂ ನಿಮ್ಮ ವಿವೇಚನೆಗೆ ಬಿಟ್ಟಿದ್ದು. ಯಾಕೆಂದರೆ ನೀವು ಜಾಣರು, ದಡ್ಡರಲ್ಲ

ವೃಷಭ

ನಿಮ್ಮ ವಯಸ್ಸಿಗೆ ತಕ್ಕಂತೆ ಇತರರು ನಿಮಗೆ ಗೌರವಾರ್ಪಣೆ ಮಾಡದಿದ್ದರೆ ಕಳೆದುಕೊಳ್ಳುವವರು ಅವರೇ ಹೊರತು, ಸೋಲು ನಿಮ್ಮದಲ್ಲ. ಆದ್ದರಿಂದ, ಏನನ್ನೂ ನಿರೀಕ್ಷಿಸದೆ ಸ್ಥಿತಪ್ರಜ್ಞತೆ ಕಾಪಾಡಿಕೊಳ್ಳುವುದು ನೀವು ಮಾಡಬೇಕಾದ ಕೆಲಸ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ. ಆವೇಶಕ್ಕೆ ಬಿದ್ದು ಮೈಗೆ ಪೆಟ್ಟು ಮಾಡಿಕೊಳ್ಳುವುದು ಬೇಡ. ಎಲ್ಲವೂ ನಾವಂದುಕೊಂಡಂತೆ ನಡೆಯದಿರುವಾಗ, ಇತರರ ಆದೇಶಗಳಿಗೆ ಅನುಗುಣವಾಗಿ ನಡೆದುಕೊಳ್ಳುವುದು ಮನಸ್ಸಿಗೂ, ದೇಹಕ್ಕೂ ಆರೋಗ್ಯಕರ. ನಿಮ್ಮ ಒಳ್ಳೆಯತನಕ್ಕೆ ಬೆನ್ನು ತಟ್ಟುವವರೂ ಇರುವುದಿಲ್ಲ, ಬೆನ್ನಿಗೆ ಚೂರಿ ಹಾಕುವವರೂ ಇರುವುದಿಲ್ಲ. ಮನೆಯಲ್ಲಿ ನಡೆಯುವ ಶುಭ ಕಾರ್ಯಕ್ರಮದ ಸಂದರ್ಭದಲ್ಲಿ ಯಾವುದೇ ಅಪಸವ್ಯ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಮಾತ್ರ ನಿಮ್ಮದು.

ಮಿಥುನ

ವೃತ್ತಿ ಜೀವನದಲ್ಲಿ ಬದಲಾವಣೆ ಅನಿವಾರ್ಯ. ಅಸಾಧ್ಯವಾವುದೂ ಇಲ್ಲದಿದ್ದರೂ ಪ್ರವಾಹದ ವಿರುದ್ಧ ಈಜದಿರುವುದು ಜಾಣರ ಲಕ್ಷಣ. ಬರುವ ದಿನಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲ ಮನೆ ಕಾರ್ಯಗಳಿಗೆ ಗಮನ ಹರಿಸಿ. ಮನೆ ಚೆನ್ನಾಗಿದ್ದರೆ ಮನಸ್ಸು ಕೂಡ ಮಲ್ಲಿಗೆಯಾಗಿರುತ್ತದೆ. ಗೋಡೆಗೆ ಬಡಿದ ರಬ್ಬರ್ ಚೆಂಡು ನಮಗೇ ತಿರುಗಿ ಬರುವ ಹಾಗೆ, ನಾವು ಮಾಡಿದ ಕೈಂಕರ್ಯದ ಲಾಭ ನಮಗೆ ದಕ್ಕೇ ದಕ್ಕುತ್ತದೆ. ಸಂತೋಷದ ಸಹಬಾಳ್ವೆಗೆ ಯಾವುದೇ ಕೊರತೆ ಇರುವುದಿಲ್ಲವಾದರೂ ಅನಗತ್ಯವಾಗಿ ಕಲಹಗಳುಂಟಾಗದಂತೆ ನೋಡಿಕೊಳ್ಳಿ.

ಕರ್ಕಾಟಕ

ಯಾರೂ ಹೊಗಳಲಿಲ್ಲ, ಯಾರೂ ತೆಗಳಲಿಲ್ಲ, ಯಾಕೋ ಖಾಲಿಖಾಲಿಯೆನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆಯೆಂದರೆ ಮುಂದಿನ ದಿನಗಳಲ್ಲಿ ಸುನಾಮಿ ಅಪ್ಪಳಿಸಲಿದೆ ಎಂದೇ ಅರ್ಥ. ಕೆಲವರ ಸಾಂಗತ್ಯದಲ್ಲಿ ಕೆಲವರ ಬಿಹೇವಿಯರ್ ಬದಲಾಗುತ್ತದೆ. ಇದನ್ನು ಕಂಡೂ ಕಾಣದಂತೆ, ಕೇಳಿಸಿಯೂ ಕೇಳಿಸದಂತೆ ಇದ್ದುಬಿಡಿ. ಟಗರಿಗೆ ತಲೆ ಕೆರೆದಂತೆಲ್ಲ ಗುದ್ದಲು ಆರಂಭಿಸುತ್ತದೆ. ಹಾಗಾಗಿ, ಯಾಕೆ ಅನಗತ್ಯವಾಗಿ ಟಗರಿನ ತಲೆ ಕೆರೆಯಲು ಹೋಗುವುದು. ನೀವುಂಟು ನಿಮ್ಮ ಕುಟುಂಬವುಂಟು, ನಿಮ್ಮ ಆರೋಗ್ಯವುಂಟು, ನಿಮ್ಮ ದೈವವುಂಟು ಎಂದು ಆರಾಮವಾಗಿ ಇದ್ದುಬಿಡಿ. ಬೊಗಳುವವರು ಬೊಗಳಿಕೊಳ್ಳಲಿ.

ಸಿಂಹ

ಯಾರಿಗೂ ಸಹಾಯವಾಗಲಿ, ಸಾಲವಾಗಲಿ, ಅನುಕಂಪವಾಗಲಿ ನೀಡಬೇಡಿ. ಮಾಡಿದರೆ, ಮುಂದೆ ಆಗುವ ಅನರ್ಥಗಳಿಗೆ, ಅಪಾರ್ಥಗಳಿಗೆ ನೀವೇ ಜವಾಬ್ದಾರರಾಗುತ್ತೀರಿ. ಯಾರೂ ನಿಮ್ಮನ್ನು ಕರೆಯದಿದ್ದರೆ ನಿಮ್ಮಲ್ಲಿ ಕರೆಯಿಸಿಕೊಳ್ಳುವ ಯೋಗ್ಯತೆ ಇಲ್ಲ ಎಂದೇ ಅರ್ಥ. ಇದಕ್ಕೆ ಹೆಚ್ಚು ಅರ್ಥ ಕಲ್ಪಿಸಿ, ಅಸಾಧ್ಯವಾದುದನ್ನು ನಿರೀಕ್ಷಿಸುವುದಕ್ಕಿಂತ, ನಿಮ್ಮನ್ನೇ ಬದಲಾಯಿಸಿಕೊಂಡರೆ ನಿಮಗೂ ಉತ್ತಮ. ಇದ್ದುದನ್ನು ಇದ್ದಹಾಗೆ ಸ್ವೀಕರಿಸುವುದನ್ನು ಕಲಿಯಿರಿ. ಹಚ್ಚಿದ ಪಟಾಕಿ ಢಂ ಅನ್ನಲೂಬಹುದು, ಟುಸ್ ಅನ್ನಲೂಬಹುದು. ತಾಕತ್ ಇದ್ದರೆ ಯಾರೂ ಅಂದುಕೊಳ್ಳದ್ದನ್ನು ಮಾಡಿತೋರಿಸಿ, ಇಲ್ಲವಾದರೆ ಸುಮ್ಮನೆ ಇದ್ದುಬಿಡಿ.

ಕನ್ಯಾ

ಗಾಳಿ ಬೀಸಿದತ್ತ ತೂರಿಕೊಳ್ಳಬೇಕು ಎಂಬ ಗಾದೆಯನ್ನು ಚಾಚೂತಪ್ಪದೆ ಪಾಲಿಸಿ. ಎಲ್ಲವೂ ಅನಾಯಾಸವಾಗಿ ಆಗುತ್ತಿರುವಾಗ, ತದ್ವಿರುದ್ಧವಾಗಿ ಚಿಂತಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಎಲ್ಲರೂ ಪಾದರಕ್ಷೆ ಧರಿಸಿ ನಡೆಯುತ್ತಿರುವಾಗ ನಾನು ಮಾತ್ರ ಬರಿಗಾಲಲ್ಲಿ ನಡೆಯುತ್ತೇನೆಂದು ಪಣತೊಡುವುದು ಮೂರ್ಖತನವಾದೀತು. ಮನದಲ್ಲಿ ಮಡುಗಟ್ಟಿರುವ ದುಡುಡವನ್ನು ಮೊದಲು ತೆಗೆದುಹಾಕಿ. ಗುರುಬಲ ನಿಮ್ಮಬಳಿಯಿರುವಾಗ ಯಾವ ಸಂಗತಿಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಆದರೆ, ಮಾಡುವ ಪ್ರಯತ್ನವನ್ನು ಮಾತ್ರ ಯಾವುದೇ ಸಂದರ್ಭದಲ್ಲಿಯೂ ಬಿಡಬೇಡಿ. ಇದ್ದಕ್ಕಿದ್ದಂತೆ ಕೆಟ್ಟಗಾಳಿ ಬೀಸುವ ಸಂಭವನೀಯತೆಯಿದೆ. ಎಚ್ಚರವಿರಲಿ.

ತುಲಾ

ನಾವೆಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಕೆಲ ದುಷ್ಟಶಕ್ತಿಗಳು ನಮ್ಮ ವಿರುದ್ಧ ಕತ್ತಿ ಮಸೆಯುತ್ತಲೇ ಇರುತ್ತವೆ. ನಮ್ಮ ಕೆಲಸಕ್ಕೆ ಅಡ್ಡಹಾಕಲು, ಕಾಲು ಎಳೆಯಲು ಯತ್ನಿಸುತ್ತಲೇ ಇರುತ್ತವೆ. ಇಂಥ ಶಕ್ತಿಗಳನ್ನು ಧೈರ್ಯದಿಂದ ಎದುರಿಸದೆ ಬೇರೆ ದಾರಿಯೇ ಇಲ್ಲ. ಇವರಲ್ಲಿ ನಮ್ಮ ಹತ್ತಿರದವರೂ, ಸ್ನೇಹಿತರೂ ಇರಬಹುದು ಎಚ್ಚರ. ಇದರಿಂದ ದೂರವಿರಬೇಕಿದ್ದರೆ ನಿಮ್ಮ ಮೆಚ್ಚಿನ ಸ್ಥಳಕ್ಕೆ ದೀರ್ಘ ಪ್ರಯಾಣ ಕೈಗೊಳ್ಳಿ. ತೀರ್ಥಯಾತ್ರೆ ಆದರೂ ಆದೀತು. ಆತ್ಮೀಯರ ಅಥವಾ ಹತ್ತಿರದ ಸಂಬಂಧಿಗಳ ಆರೋಗ್ಯದ ಬಗ್ಗೆ ನಿಗಾ ವಹಿಸಿ. ನೌಕರರಿಗೆ ತಿಂಗಳ ಕೊನೆಯಲ್ಲಿ ಅಲ್ಪ ಆಘಾತ ಆದರೂ ಅಚ್ಚರಿಯಿಲ್ಲ. ಯಾವುದಕ್ಕೂ ಮಾನಸಿಕವಾಗಿ ಸಿದ್ಧತೆ ಮಾಡಿಕೊಳ್ಳಿ.

ವೃಶ್ಚಿಕ

ಅವಕಾಶಗಳೆನ್ನುವುದು ನದಿಯಲ್ಲಿ ಆಗಾಗ ಪುಟಿದೇಳುವ ಮೀನುಗಳ ಹಾಗೆ. ಸೂಕ್ತವಾದದ್ದನ್ನು ಚಾಕಚಕ್ಯತೆಯಿಂದ ಕಬಳಿಸುವ ಜಾಣತನವನ್ನು ನೀವು ತೋರಬೇಕು. ಹಾಗೆಯೆ, ನಮ್ಮ ದಾರಿಯಲ್ಲಿ ಸಿಗುವ ಸವಾಲುಗಳನ್ನು ತಡಮಾಡದೆ ಸ್ವೀಕರಿಸುವ ಛಾತಿ ತೋರಿಸಿ. ಇವು ಹಲವಾರು ಅನುಭವಗಳ ಅನುಭೂತಿಗೆ ಕಾರಣವಾಗಬಹುದು. ಮುಂದೆ ಆಗುವ ಪರಿಣಾಮಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಸುಮ್ಮನೆ ಆನಂದಿಸಿ. ಕೆಲವೊಮ್ಮೆ ಅತಿಯಾದ ಪ್ರೀತಿ ಕಿರಿಕಿರಿಯೆನ್ನಿಸಬಹುದು. ಆದರೆ, ಇಂಥ ಕಿರಿಕಿರಿಗಳನ್ನು ಪ್ರೀತಿಯಿಂದಲೇ ಗೆಲ್ಲಿರಿ.

ಧನುಸ್ಸು

ಕಳೆದ ತಿಂಗಳ ಕೊನೆಯಲ್ಲಿ ಹೆಗಲ ಮೇಲೆ ಹೊತ್ತುಕೊಂಡಿದ್ದ ದುಗುಡದ ಗೋಣೀಚೀಲವನ್ನು ಈ ತಿಂಗಳೂ ಹೊತ್ತು ಮುನ್ನಡೆದರೆ ನಿಮಗಿಂತ ಮೂರ್ಖರು ಮತ್ತೊಬ್ಬರಿರುವುದಿಲ್ಲ. ಚಿಂತೆ ಬಿಸಾಕಿ, ಅವಕಾಶಗಳನ್ನು ಹುಡುಕಿ ಹೊರಡಿ. ಅಥವಾ ಅವಕಾಶಗಳೇ ಮುಂದೆ ಬಂದಾಗ ಕಣ್ಣಿಗೆ ಎಣ್ಣೆ ಹಾಕಿಕೊಂಡು ಕೂಡಬೇಡಿ. ಈ ಅವಕಾಶಗಳು ನಿಮ್ಮ ಕಚೇರಿಯಲ್ಲೇ ಎದುರಾಗಬಹುದು, ಹೊರಗಡೆಯಲ್ಲೂ. ಒಂದು ನೆನಪಿಡಿ, ನೀವು ಹಾಕಿದ ಪ್ರಯತ್ನಕ್ಕೆ ಯಾವತ್ತೂ ಸೋಲು ಇರುವುದಿಲ್ಲ. ಆದರೆ, ಹಣಕಾಸಿನ ವಿಚಾರದಲ್ಲಿ ಕಟ್ಟುನಿಟ್ಟಾಗಿರಿ. ಕಡೆ ಕ್ಷಣದಲ್ಲಿ ಆರ್ಥಿಕ ಮುಗ್ಗಟ್ಟಿನಲ್ಲಿ ಬೀಳದಂತೆ ಎಚ್ಚರವಹಿಸಿ.

ಮಕರ

ನೀವು ಏನನ್ನು ಹೇಳಬೇಕೆಂದುಕೊಂಡಿದ್ದೀರೋ ಅದನ್ನು ಅತ್ಯಂತ ಸ್ಪಷ್ಟವಾದ ಉಕ್ತಿಗಳಲ್ಲಿ ಹೇಳಿರಿ. ನಿಮ್ಮ ಮನದಲ್ಲಿ ಏನಿದೆಯೆಂದು ಬ್ರಹ್ಮ ಕೂಡ ಊಹಿಸಲಾರ. ಅಂಥದ್ದರಲ್ಲಿ ಹುಲು ಮಾನವ ನಿಮ್ಮ ಅಂತರಾಳದಲ್ಲಿ ಏನಿದೆಯೆಂದು ತಿಳಿಯುವುದು ಹೇಗೆ? ಅವರು ನಿಮ್ಮವರೂ ಆಗಿರಬಹುದು, ಅನ್ಯರೂ ಆಗಿರಬಹುದು. ಪ್ರಭಾವಿಗಳ ಸಂಪರ್ಕದಲ್ಲಿದ್ದರೆ ಅದರ ಲಾಭ ಪಡೆದುಕೊಳ್ಳುವುದರಲ್ಲಿ ಯಾವುದೇ ನಷ್ಟವಿಲ್ಲ. ಕಳೆದ ತಿಂಗಳು ಹುಡುಕುತ್ತಿದ್ದ ಸ್ನೇಹಿತರು ಸಿಕ್ಕಿದರಾ? ಸಿಗದಿದ್ದರೆ ನೀವು ಪ್ರಯತ್ನವಾದರೂ ಎಂತಹುದು? ಮತ್ತೆ ನಿಮ್ಮನ್ನು ನೀವು ವಿಶ್ಲೇಷಿಸಿಕೊಳ್ಳುವ ಅನಿವಾರ್ಯತೆ ಒದಗಿಬಂದಿದೆ.

ಕುಂಭ

ನಮ್ಮ ಕೈಯಲ್ಲಿರುವ ರೇಖೆಗಳು ಹೇಳುವ ಭವಿಷ್ಯಕ್ಕೂ ನಮ್ಮ ಸ್ಥಿತಿಗತಿಗಳಿಗೂ ಹಲವಾರು ಬಾರಿ ಸಂಬಂಧವೇ ಇರುವುದಿಲ್ಲ. ನಮ್ಮ ಭವಿಷ್ಯತ್ತು ಏನೇ ಇರಲಿ, ಹೇಗೇ ಇರಲಿ ಇಂದಿನ ಪರಿಸ್ಥಿತಿಯಲ್ಲಿ ಹೇಗೆ ಜೀವನ ಸಾಗುತ್ತದೋ ಹಾಗೆಯೇ ನಡೆದುಕೊಂಡು ಹೋಗುವುದರಲ್ಲಿ ಯಾವುದೇ ಅರ್ಥವಿಲ್ಲ. ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬೇಕು. ನಮ್ಮ ಭವಿಷ್ಯ ನಮ್ಮ ಕೈಯಲ್ಲಿಯೇ ಇದೆ ಎಂಬ ಮಾತು ಸುಳ್ಳಲ್ಲ. ಈ ತಿಂಗಳ ನಿಮ್ಮ ಖರ್ಚುವೆಚ್ಚಗಳ ಬಗ್ಗೆ ನಿಗಾ ಇರಲಿ. ಚಡ್ಡಿಯ ಜೇಬಿಗೆ ತೂತುಬಿದ್ದ ಮೇಲೆ ಕೈಹಾಕಿ ನೋಡಿಕೊಂಡರೆ ಏನು ಪ್ರಯೋಜನ. ನಮ್ಮ ದುರ್ದಶೆಗಳಿಗೆ ಅವರಿವರನ್ನು ಹಲುಬುವುದಕ್ಕಿಂತ ಒಮ್ಮೆ ಕುಳಿತುಕೊಂಡು ಚಿಂತನೆ ನಡೆಸಿದರೆ ಉತ್ತಮ.

ಮೀನ

ಹಲವಾರು ವರ್ಷಗಳಿಂದ ಕಾಡಿಸಿಪೀಡಿಸಿ ಪುಸಕ್ಕನೆ ಜಾರಿಹೋಗುತ್ತಿದ್ದ ಯಶಸ್ಸು ನಿಮ್ಮ ಕೈಗೆಟಕುವ ಹಂತಕ್ಕೆ ಬರಬಹುದು. ಇಂಥ ಘಳಿಗೆಗಾಗಿ ಕಾದು ಕುಳಿತಿರಿ. ಬಂದಾಗ ಬಾಚಿ ತಬ್ಬಿಕೊಂಡು ಆನಂದಿಸಿ. ಇಂಥ ಸಮಯದಲ್ಲಿ ಕೊಂಕು ನುಡಿಯುವವರ ಸಂಖ್ಯೆ ಕಮ್ಮಿಯೇನು ಇರುವುದಿಲ್ಲ. ಉತ್ತರ ಕೊಡಬೇಕಾದ ಸಂದರ್ಭದಲ್ಲಿ ದಿಟ್ಟವಾಗಿ ನೀಡಿ. ನೀವು ನಿಮ್ಮ ಅಧಿಪತ್ಯವನ್ನು ಸ್ಥಾಪಿಸದೆ ಹೋದರೆ ತಲೆ ಮೇಲೆ ನರ್ತನ ಮಾಡಲು ಜನ ಕಾದಿರುತ್ತಾರೆ. ದೀರ್ಘ ಪ್ರವಾಸ ಕೈಗಳ್ಳುವ ಸಮಯ ಬಂದಿದೆ.

English summary
The calendars specially designed by astrologer Pandit Anuj K. Shukla shows days when the Moon, Sun, and planets favour particular zodiac sign. Astro Calendar for Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius and Pisces.
Please Wait while comments are loading...