ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಯೋತಿಷ್ಯ : ಹನ್ನೆರಡು ರಾಶಿಗಳ ಗುಣ-ಸ್ವಭಾವ ಹೇಗಿರುತ್ತದೆ ಗೊತ್ತಾ?

ಹನ್ನೆರಡು ರಾಶಿಗಳು, ಹನ್ನೆರಡು ರೀತಿಯ ಜನ. ಅಯ್ಯೋ ಇದೇನು ಇಷ್ಟು ಸಲೀಸಾಗಿ ಹೇಳಬಹುದಾ ಅಂತ ಅನ್ನಿಸಿಯೇ ತೀರುತ್ತದೆ. ಹೌದು. ನಮ್ಮ ಋಷಿಗಳ ಪ್ರಕಾರ, ರಾಶಿಯ ಆಧಾರದಲ್ಲೂ ಕೆಲವು ಸಂಗತಿಗಳನ್ನು ಹೇಳಬಹುದು.

|
Google Oneindia Kannada News

ಹನ್ನೆರಡು ರಾಶಿಗಳು, ಹನ್ನೆರಡು ರೀತಿಯ ಜನ. ಅಯ್ಯೋ ಇದೇನು ಇಷ್ಟು ಸಲೀಸಾಗಿ ಹೇಳಬಹುದಾ ಅಂತ ಅನ್ನಿಸಿಯೇ ತೀರುತ್ತದೆ. ಹೌದು. ನಮ್ಮ ಋಷಿಗಳ ಪ್ರಕಾರ, ರಾಶಿಯ ಆಧಾರದಲ್ಲೂ ಕೆಲವು ಸಂಗತಿಗಳನ್ನು ಹೇಳಬಹುದು.

ಜ್ಯೋತಿಷ್ಯದಲ್ಲಿ ಇಪ್ಪತೇಳು ನಕ್ಷತ್ರ, ನೂರಾ ಎಂಟು ಪಾದ, ಹನ್ನೆರಡು ರಾಶಿಗಳಿವೆ. ಇಂಥ ರಾಶಿಯವರ ಗುಣ ಹೀಗೆ ಎಂದು ಹೇಳುವಂತೆಯೇ ನಕ್ಷತ್ರ ಹಾಗೂ ಲಗ್ನದ ಆಧಾರದಲ್ಲಿಯೂ ವ್ಯಕ್ತಿಯ ಗುಣ, ಶಕ್ತಿ, ದೌರ್ಬಲ್ಯಗಳನ್ನು ತಿಳಿಯಬಹುದು.[ಜ್ಯೋತಿಷ್ಯ: ನಿಮ್ಮ ಪ್ರಶ್ನೆ ಕೇಳಿ, ಜ್ಯೋತಿಷಿಗಳಿಂದ ಉತ್ತರ ಪಡೆಯಿರಿ]

ಅದೇನು ಹೇಳ್ತೀರೋ ಹೇಳ್ರೀ ನಂದು ಈ ರಾಶಿ ಅಂದರೆ, ಸ್ವಲ್ಪ ತಡ್ಕಳಿ. ಕೆಲವು ಸಂಗತಿ ಎಂದು ಅರಂಭದಲ್ಲಿ ಹೇಳಿದ್ದೇ ಆ ಕಾರಣಕ್ಕೆ. ಇಲ್ಲಿರುವ ಹನ್ನೆರಡು ರಾಶಿಯವರ ಗುಣಗಳ ವಿವರಣೆ ಸ್ಥೂಲ ಮಟ್ಟದು. ಜಾತಕದಲ್ಲಿನ ಗ್ರಹ ಸ್ಥಿತಿಗಳು, ಲಗ್ನ, ಅದರ ದ್ವಾದಶ ಭಾವಗಳು, ಶುಭಾಶುಭ ಯೋಗಗಳು, ದಶೆ-ಭುಕ್ತಿಯು ಪರಿಣಾಮ ಬೀರುವುದನ್ನು ತಪ್ಪಿಸುವುದಕ್ಕೆ ಆಗುವುದಿಲ್ಲ.[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಅದರೆ, ಯಾವುದೇ ವ್ಯಕ್ತಿಯ ಮೂಲ ಸ್ವಭಾವದಲ್ಲಿ ಆಯಾ ರಾಶಿಗಳ ಅಧಿಪತಿಗಳ ಪಾತ್ರ ತೆಗೆದು ಹಾಕುವಂತಿಲ್ಲ. ಅದನ್ನೇ ಇಲ್ಲಿ ಕೊಡಲಾಗಿದೆ. ಎಷ್ಟು ತೊಳೆದರೂ ಒಂದು ತುಣುಕಾದರೂ ಉಳಿಯುವಂತೆ ಮಾಡುವ ಆ ಗ್ರಹಗಳು, ಆಯಾ ಗುಣವನ್ನು ಸಂದರ್ಭಕ್ಕೆ ತಕ್ಕಂತೆ ಹೊರತರುತ್ತವೆ. ವಯಸ್ಸಿಗೆ ತಕ್ಕಂತೆಯೂ ಗುಣಗಳು ಕಾಣಿಸಿಕೊಳ್ಳುತ್ತವೆ.[ಜ.26ಕ್ಕೆ ಧನು ರಾಶಿಗೆ ಶನಿ ಪ್ರವೇಶ: ಯಾವ ರಾಶಿಗೆ ಏನು ಫಲ, ಪ್ರಭಾವ?]

ಅಂದಹಾಗೆ, ನಿಮ್ಮ ರಾಶಿ ಯಾವುದು? ಓದಿ, ನಿಮ್ಮ ಅಭಿಪ್ರಾಯ ತಿಳಿಸಿ.

ಮೇಷ ರಾಶಿ

ಮೇಷ ರಾಶಿ

ನಿಮಗೇನು ಬೇಕೋ ಅದನ್ನು ದಕ್ಕಿಸಿಕೊಳ್ಳೋವರೆಗೆ ಸುಮ್ನೆ ಇರೋ ಜಾಯಮಾನವಲ್ಲ. ಅದೇನು ಅಹಂಕಾರ ಇವರಿಗೆ ಅಂತ ಜನರು ಅಂದುಕೊಳ್ಳೋ ಹಾಗೊಂದು ಇಮೇಜ್ ನಿಮ್ಮದಾಗಿ ಬಿಡುತ್ತದೆ. ವಾದ-ಚರ್ಚೆ ಅಂತ ಮಾಡುವಾಗ ಮತ್ತಷ್ಟು ಬಿಸಿಬಿಸಿಯಾಗಿ ಮಾತು ಶುರು ಹಚ್ಚಿಕೊಳ್ತೀರಿ. ಏನೋ ಕೂಗಾಟ ಆಗ್ತಿದೆ ಅಂತ ಅಕ್ಕಪಕ್ಕದವರು ಬಂದು ನೋಡೋದರೊಳಗೆ ಥಂಡಾ ಥಂಡಾ ಕೂಲ್ ಕೂಲ್ ಆಗಿರ್ತಿರಿ. ಹಾಗಂತ ನೀವೇನು ತೊಂದರೆ ಕೊಡುವ ಜಾಯಮಾನದವರಲ್ಲ.

ನಾನೇ ಫಸ್ಟು ಆಗಬೇಕು ಅನ್ನೋದು ಯಾವಾಗಲೂ ತಲೆಯಲ್ಲಿ ಓಡ್ತಾ ಇರುತ್ತೆ. ತಲೆಗೆ ತುಂಬ ಕೆಲಸ ಕೊಡುವ ಆಸಾಮಿಗಳಲ್ಲ. ತಲೆ ಕೆದರಿ ಯೋಚನೆ ಮಾಡುವ ವಿಚಾರಗಳಿದ್ದರೆ ಕೈ ಕೊಡವಿ ಸುಮ್ಮನಾಗಿ ಬಿಡ್ತಿರಿ. ತುಂಬ ಸರಳವಾದ, ಆ ಕ್ಷಣದ ವ್ಯಕ್ತಿ ನೀವು. ತಕ್ಷಣದ ಸ್ಪಂದನೆ, ಯಾವುದೇ ಅನುಭವಕ್ಕೆ ನುಗ್ಗಿ ಎದುರಾಗಬೇಕು ಎಂಬ ರೀತಿ ನಿಮ್ಮದು. ದೊಡ್ಡ ಯಶಸ್ಸು ಪಡೆಯೋದು ನಿಮ್ಮ ಮೊದಲ ಪ್ರೀತಿ. ಕುಜ ನಿಮ್ಮ ಅಧಿಪತಿ.

ವೃಷಭ ರಾಶಿ

ವೃಷಭ ರಾಶಿ

ಮೊದಲು ನಿಮಗೆ ಆರಾಮಾಗಿ ಇದೀನಿ, ಯಾವುದೇ ತೊಂದರೆ ಇಲ್ಲ ಅಂತ ಪದೇ ಪದೇ ಅನ್ನಿಸಬೇಕು. ಮಣ್ಣಿನ ಮೇಲೆ ಚಕ್ಕಳ ಮಕ್ಕಳ ಹಾಕಿ ಕೂತು ಪುಟ್ಟ ಮಗುವಿನ ಮಾರುದ್ದ ಕಂಪ್ಲೇಂಟನ್ನೂ ಕೇಳಬಲ್ಲಿರಿ. ಯಾಕೆಂದರೆ ಜೀವನದ ಸಣ್ಣ-ಪುಟ್ಟ ಸಂಗತಿಗಳೂ ಬಹಳ ಮುಖ್ಯ ಎಂಬ ನಂಬಿಕೆ ನಿಮ್ಮದು. ಚೆಂದದ ಮನೆ, ಒಳ್ಳೆ ಊಟ ಮತ್ತು ಒಂದಿಷ್ಟು ಒಳ್ಳೆಯ ಫ್ರೆಂಡ್ಸ್ ಇಷ್ಟು ನಿಮ್ಮ ಆದ್ಯತೆ.

ನಿಮಗೆ ಗೊತ್ತಿಲ್ಲದ ಹಾಗೆ ನಿಮ್ಮ ಹಿಂದೊಂದು ಪ್ರಭಾವಲಯ ಇರುತ್ತೆ. ಒಳ್ಳೆ ಸ್ನೇಹಿತರು ನೀವು, ಆದರೆ ಸ್ವಲ್ಪ ಸೋಂಬೇರಿ ಕಣ್ರೀ. ನಿಮ್ಮ ಬಗ್ಗೆ ನೀವೇ ಬೇಜಾರು ಮಾಡಿಕೊಂಡುಬಿಡ್ತೀರಿ. ಯಾವುದೂ ತೊಂದರೆ ಆಗಬಾರದು ಅಂತ ನೀವು ಮಾಡೋ ಕಾಳಜಿ ಹೀಗೆ ಬೇಸರ ತರುತ್ತದೆ. ತಾಯಿಯ ಮಮತೆಯಂಥ ಗುಣ ನಿಮ್ಮಲ್ಲಿ ಸದಾ ಜಾಗೃತವಾಗಿರುತ್ತದೆ. ಆ ಕಾರಣಕ್ಕೆ ನೀವು ಇಷ್ಟವಾಗ್ತೀರಿ. ನಿಮ್ಮ ರಾಶಿ ಅಧಿಪತಿ ಶುಕ್ರ.

ಮಿಥುನ ರಾಶಿ

ಮಿಥುನ ರಾಶಿ

ನಿಮಗೆ ಮನರಂಜನೆ, ಮಾಹಿತಿ ಎರಡೂ ಬಹಳ ಮುಖ್ಯ. ನಿಮ್ಮ ಸುತ್ತ-ಮುತ್ತ ಅಂಥ ಮಜವಾದ ವಾತಾವರಣ ಇಲ್ಲ ಅಂದರೆ ಬೋರೆದ್ದು ಹೋಗ್ತೀರಿ. ಮೆದುಳು ಸದಾ ಚಟುವಟಿಕೆಯಾಗಿರುತ್ತದೆ. ಅದಕ್ಕೆ ಮನರಂಜನೆ ಬೇಕೇಬೇಕು. ಒಂದೇ ಸಲಕ್ಕೆ ಹತ್ತಾರು ಕೆಲಸ ಮಾಡುವ ಮೆದುಳು ನಿಮ್ಮದು. ಇಬ್ಬರು ಒಟ್ಟು ಹಾಕಿಕೊಳ್ಳೋ ವಿಷಯ ನೀವೊಬ್ಬರೇ ಗ್ರಹಿಸ್ತೀರಿ.

ಹೇಳುವ ವಿಚಾರದಲ್ಲಿ ತುಂಬ ಸ್ಪಷ್ಟ. ನೀವು ಅನುಭವಿಸುವುದಕ್ಕಿಂತ ಯೋಚಿಸುವುದೇ ಜಾಸ್ತಿ. ಎಲ್ಲದರ ಬಗ್ಗೆಯೂ ಇದೆಂಥ ನಿರ್ಭಾವುಕತೆ ಇವರಿಗೆ ಅಂತ ನಿಮ್ಮ ಸುತ್ತಲಿನವರಿಗೆ ಅನ್ನಿಸುತ್ತದೆ. ಸದಾ ಒಂದಿಲ್ಲೊಂದು ವಿಚಾರ ಯೋಚಿಸೋ ನೀವು, ಒಂದಕ್ಕೆ ಅಂಟಿಕೊಳ್ಳುವ ಪೈಕಿ ಅಲ್ಲ. ನಿಮಗೆ ಉಳಿದವರು ಸ್ವಲ್ಪ ದಡ್ಡರಂತೆಯೂ, ಕೆಲವೊಮ್ಮೆ ಏನೂ ಗೊತ್ತಿಲ್ಲದವರಂತೆಯೂ ಕಾಣ್ತಾರೆ. ಬುಧ ನಿಮ್ಮ ಅಧಿಪತಿ

ಕರ್ಕಾಟಕ ರಾಶಿ

ಕರ್ಕಾಟಕ ರಾಶಿ

ನೀವು ಯಾರಾದರೊಬ್ಬರನ್ನು ಹಚ್ಚಿಕೊಳ್ಳುತ್ತಲೇ ಇರ್ತೀರಿ. ನಿಮ್ಮದೊಂಥರಾ ಭಾವನಾ ಪ್ರಪಂಚ. ಮನಸಿದ್ದಂಗೆ ಮಾದೇವ ಅಂತಾರಲ್ಲ ಹಾಗೆ. ಅದು ಹೇಗೆಂದರೆ ಹಾಗೆ, ಎಲ್ಲೆಂದರಲ್ಲಿ ಓಡ್ತಾನೇ ಇರುತ್ತೆ. ಜೊತೆಗೆ ವಿಪರೀತ ಸೂಕ್ಷ್ಮ ಬೇರೆ. ಮಕ್ಕಳ ಹಾಗೆ ನಿಮ್ಮ ಕಲ್ಪನಾ ಶಕ್ತಿ. ಇನ್ನು ದಿಲ್ ತೋ ಬಚ್ಚಾ ಹೈ ಜೀ. ಆದ್ದರಿಂದಲೇ ಸದಾ ಸಂಕೋಚ ಇರುತ್ತದೆ. ಜತೆಗೊಬ್ಬರು ಮನಸ್ಸಿಗೆ ಹತ್ತಿರವಾದವರು ಇರಲೇಬೇಕು.

ಆದರೆ, ಎಷ್ಟು ರೋಮ್ಯಾಂಟಿಕ್ ಆಗಿ ಯೋಚನೆ ಮಾಡ್ತೀರಿ, ವಾಹ್ ವಾಹ್! ನೀವೇ ಮಲಗುವಾಗ ಹಾಡು ಹೇಳಿಕೊಂಡೋ ಕೇಳಿಕೊಂಡೋ ಮಲಗ್ತೀರಿ. ಹತ್ತಿರದವರು ಅಂತ ಒಮ್ಮೆ ಅನ್ನಿಸಿಬಿಟ್ಟರೆ ಹೇಗಿದಾರೋ, ಊಟವಾಯಿತೋ ಇಲ್ಲವೋ ಮನೆಗೆ ಹೋದರಾ ಮಲಗಿದಾರಾ ಹೀಗೆ ಅವರದೇ ಧ್ಯಾನ. ನೀವೊಂಥರಾ ತಾಯಿ-ಮಗು ಎರಡೂ ಗುಣದ ಕಾಂಬೋ ಆಫರ್. ಚಂದ್ರ ನಿಮ್ಮ ಅಧಿಪತಿ.

ಸಿಂಹ ರಾಶಿ

ಸಿಂಹ ರಾಶಿ

ಬದುಕನ್ನು ಪೂರ್ತಿಯಾಗಿ ಅನುಭವಿಸುವವರು ನೀವು. ಒಂದು ಲೋಟ ಕಾಫಿ ಇರಲಿ, ಒಂದು ಹೋಳಿನ ಉಪ್ಪಿನಕಾಯಿ ಇರಲಿ ಅದರ ಸ್ವಾದ ನಿಮ್ಮ ಅನುಭೂತಿಗೆ ಬರಲೇಬೇಕು. ಪ್ರೀತಿ ಕೊಟ್ಟು-ತಗೊಳ್ಳೊ ಎರಡು ಬಾಬ್ತು ನಿಮ್ಮಲ್ಲಿ ಉಂಟು. ಏನೇ ಇರಲಿ ಮಜವಾಗಿರಲಿ ಎಂಬುದು ನಿಮ್ಮ ಮೂಲ ಮಂತ್ರ. ಜೀವನ ಅಂದರೇನು ಅಂತ ಪ್ರಶ್ನೆ ಮಾಡಿದರೆ, ಒಂದು ಗಮ್ಮತ್ತಾದ ಪಾರ್ಟಿ ಅಂತೀರಿ. ಸಾಧ್ಯವಾದಷ್ಟು ಒಳ್ಳೆ ಮೂಡ್ ನಲ್ಲಿರಬೇಕು ಅನ್ನೋದೇ ನಿಮ್ಮ ಆದ್ಯತೆ.

ಟೀಕೆ, ತಿರಸ್ಕಾರಗಳು ನಿಮಗೆ ಸಹಿಸೋದಿಕ್ಕೆ ಆಗೋದೇ ಇಲ್ಲ. ನಿಮ್ಮ ಬಗೆಗೊಂದು ಗರ್ವ, ನಾನು-ನಾನು ಎಂಬ ಆಲೋಚನೆ ಇರೋದರಿಂದ ಬೇರೆ ಯಾರಾದರೂ ಗುರುತಿಸಿ, ಭೇಷ್-ಭೇಷ್ ಅನ್ನಲೇಬೇಕು. ನಿಮ್ಮ ಆಲೋಚನೆ ಜೀವನದ ಬಗ್ಗೆ ತೀರ್ಮಾನಗಳಿಂದ ಎಂಥ ಹುಚ್ಚ್ ಇದ್ದೀ ಅಂತ ಅನ್ನಬಹುದು. ನೀವು ಭಾವನೆಗಳನ್ನು ವ್ಯಕ್ತಪಡಿಸುವ ರೀತಿ ನಾಟಕೀಯವಾಗಿಯೂ ಇರುತ್ತದೆ. ನಿಮ್ಮ ಅಧಿಪತಿ ರವಿ.

ಕನ್ಯಾ ರಾಶಿ

ಕನ್ಯಾ ರಾಶಿ

ಲೆಕ್ಕಾಚಾರದ ಆಟಗಾರರು ನೀವು. ಎಲ್ಲವನ್ನೂ ವಾಸ್ತವದ ತಕ್ಕಡಿಯಲ್ಲೇ ತೂಗ್ತೀರಿ. ನಿಮ್ಮ ಭಾವನೆಗಳು ತುಂಬ ಜೋರಾಗಿ ವ್ಯಕ್ತವಾಗಲ್ಲ. ಕೆಲಸ ಆಗಬೇಕು ಅಂದಾಗ ನಡೆದುಕೊಳ್ಳುವ ರೀತಿ ಇದೆಯಲ್ಲ, ನಿಮ್ಮಂಥ ಮ್ಯಾನೇಜರ್ ಇನ್ನೊಬ್ಬರಿಲ್ಲ. ಎಂಥ ತಲೆ ಹೋಗುವ ಸನ್ನಿವೇಶದಲ್ಲೂ ಲೆಕ್ಕಾಚಾರ ತಪ್ಪದ ನಿಮ್ಮ ಆಲೋಚನೆ ಎಂಥವರಿಗೂ ಆಶ್ಚರ್ಯ ತರುತ್ತೆ. ಪರ್ಫೆಕ್ಷನಿಸ್ಟ್ ಅನ್ನೋ ಮಾತಿಗೆ ಮತ್ತೊಂದು ಹೆಸರು ಕನ್ಯಾ ರಾಶಿ.

ಯಾವುದೂ ಹೆಚ್ಚಾಗಬಾರದು ಅನ್ನೋದು ನಿಮ್ಮ ನಂಬಿಕೆ. ಆ ಕಾರಣಕ್ಕೆ ಎಲ್ಲವನ್ನೂ ತಕ್ಕಡಿಯಲ್ಲೇ ತೂಗ್ತೀರಿ. ನಿಮಗೆ ವಸ್ತುಗಳ ಬಗ್ಗೆ ವಿಪರೀತವಾದ ಪ್ರೀತಿ. ಬೇಕೆಂತಲೇ ಕೆಲವನ್ನು, ಕೆಲವರನ್ನು ಬಿಟ್ಟಾಕ್ತೀರಿ. ನಿಮ್ಮ ಬಗ್ಗೆಯೇ ನಿಮ್ಮ ವಿಮರ್ಶೆ, ಟೀಕೆ ಭಯಾನಕವಾಗಿರುತ್ತದೆ. ಈ ವಿಷಯದಲ್ಲಿ ಇನ್ನು ಬೇರೆಯವರಿಗೆ ಎಲ್ಲಿ ರಿಯಾಯಿತಿ ಸಿಗಬೇಕು? ಆದರೆ ಕೆಲವು ವಿಚಾರವನ್ನು ಬಿಟ್ಟು ಮುಂದೆ ಸಾಗುವುದನ್ನು ಕಲಿಯಬೇಕು. ನಿಮ್ಮ ಅಧಿಪತಿ ಬುಧ.

ತುಲಾ ರಾಶಿ

ತುಲಾ ರಾಶಿ

ಸೊಗಸಾದ ಮಾತುಗಾರರು ನೀವು. ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುವ ಬಹುತೇಕ ಹೆಸರುವಾಸಿ ಅಸಾಮಿಗಳು ಇವರೇ. ನನ್ನ ಐಡಿಯಾ ಕೇಳಿಲ್ಲಿ.. ಅಂತ ಹೇಳ್ತಿದ್ದರೆ, ಓಹ್ ಇದು ತುಲಾ ರಾಶಿಯೇ ಅಂತ ನಿರ್ಧರಿಸಬಹುದು. ವಾದ ಮಾಡುವಾಗ ನಾಲ್ಕು ಮೂಲೆಗೂ ತಗುಲುವ ಹಾಗೆ ಮಾಡೋ ಪೈಕಿ ನೀವು, ರಾಜಿ ಮಾಡಿಕೊಳ್ಳೋಕೆ ಕೈ ಎತ್ತಿದ ಕಾಲದಲ್ಲೂ ಬಗುಲಿನ ದೊಣ್ಣೆಯಿಂದ ಒಂದಾದರೂ ಪೆಟ್ಟು ಹಾಕ್ತೀರಿ.

ಎಂಥ ಪರಿಸ್ಥಿತಿಗೂ ಛಕ್ಕಂತ ಹೊಂದಿಕೊಳ್ಳುವ ಸಾಮರ್ಥ್ಯ ನಿಮ್ಮದು. ಅಂದರಿಕಿ ಮಂಚವಾಳ್ಳು ಅಂತಾರಲ್ಲ ಹಾಗೆ ಎಲ್ಲರ ಪಾಲಿನ ಒಳ್ಳೆಯವರು ಅಗುವಂಥ ಅವಕಾಶ ಯಾವತ್ತೂ ತಪ್ಪಿಸಿಕೊಳ್ಳಲ್ಲ. ಇದು ನಿಮ್ಮ ಸ್ವಭಾವದಲ್ಲೇ ಬೆರೆತುಹೋಗಿರುತ್ತದೆ. ಸಂಬಂಧ ಹಾಳಾಗಬಾರದು ಎಂಬ ಕಾರಣಕ್ಕೆ ನಿಮ್ಮ ಭಾವನೆ ಕೂಡ ಹೊರಗೆ ಹಾಕಲ್ಲ. ನಿಮ್ಮ ಒಳ್ಳೆಯತನ ಎದುರಿನವರು ಹೇಳಬೇಕು, ಹೊಗಳಬೇಕು ಅನ್ನೋ ನಿರೀಕ್ಷೆ ಬಿಟ್ಟುಬಿಡಿ. ನಿಮ್ಮ ಅಧಿಪತಿ ಶುಕ್ರ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಇವರು ನೂರರಷ್ಟು ಯಾರನ್ನಾದರೂ ಯಾವುದನ್ನಾದರೂ ನಂಬುವವರೆಗೆ ಚಡಪಡಿಸುತ್ತಲೇ ಇರ್ತಾರೆ. ಇವರಿಗೇನಾದರೂ ಮಾನಸಿಕ ಸಮಸ್ಯೆ ಇದೆಯಾ ಅಂತ ಅನುಮಾನ ಬರುವ ಮಟ್ಟಿಗೆ ವಿಪರೀತಕ್ಕೆ ಹೋಗುತ್ತದೆ ಇವರ ಅನುಮಾನ. ಸದಾ ಚಿಪ್ಪಿನೊಳಗೆ ಇರುವ ನೀವು, ರಹಸ್ಯಗಳನ್ನು ಸುಲಭಕ್ಕೆ ಹೊರ ಹಾಕುವವರಲ್ಲ. ನೀವು ಏನು ಅಂತ ಅರ್ಥ ಆಗ್ತಿಲ್ಲ ಅನ್ನೋ ಕಾರಣಕ್ಕೆ ನಿಮ್ಮ ಕಡೆಗೆ ಜನರು ಆಕರ್ಷಿತರಾಗ್ತಾರೆ.

ಒಂದು ಸಲ ನಿಮಗೆ ನಂಬಿಕೆ ಮೂಡಿದರೆ ಅಯ್ಯೋ ಅವರ ಸ್ಥಿತಿ.. ವಿಪರೀತ ಪೊಸೆಸಿವ್ ಆಗ್ತೀರಿ. ಬೇರೆಯವರ ಜತೆಗೆ ಹೆಚ್ಚಿಗೆ ಮಾತನಾಡಿದರೆ ಹೊಟ್ಟೆಕಿಚ್ಚು ಪಡ್ತೀರಿ. ಒಟ್ಟಿನಲ್ಲಿ ಕರಡಿ ಪ್ರೀತಿ ಅಂತಾರಲ್ಲ ಹಾಗೆ. ನಿಮ್ಮ ಮನಸ್ಸಿಗೆ ಮುಂದೆ ನಡೆಯುವುದನ್ನು ತಿಳಿಸುವ ಶಕ್ತಿಯೊಂದಿದೆ. ಕೆಲವರು ಅದನ್ನು ಬಳಸಿ ಅಚ್ಚರಿಗೆ ದೂಡ್ತೀರಿ. ಅದು ಇಷ್ಟ- ಇದು ಇಷ್ಟ ಇಲ್ಲ ಹೀಗೆ ಯಾವುದಾದರೂ ಸರಿ, ನೂರು ಪರ್ಸೆಂಟ್ ನಿಮ್ಮ ಭಾವನೆ ಅದಕ್ಕೆ ಪಕ್ಕಾಗಿರುತ್ತದೆ. ನಿಮ್ಮ ಅಧಿಪತಿ ಕುಜ.

ಧನುಸ್ಸು ರಾಶಿ

ಧನುಸ್ಸು ರಾಶಿ

ಅನುಭವ, ಸಾಹಸ-ಇವೆರಡೂ ನಿಮ್ಮ ಪಾಲಿನ ಉಸಿರಾಟದಂತೆ. ಎಂಥೆಂಥದೋ ಕನಸಿನ ಬೆನ್ನಟ್ಟಿ ಹೋಗ್ತಾನೇ ಇರ್ತೀರಿ. ಹೊಸ ಬಗೆ ಊಟ, ಊರು, ಜನ ಒಟ್ಟಿನಲ್ಲಿ ಎಲ್ಲ ಹೊಸತು ನಿಮ್ಮನ್ನ ಸೆಳೆಯುತ್ತಲೇ ಇರುತ್ತವೆ. ಸ್ವಲ್ಪ ನೇರಾನೇರ ಹೇಳ್ತೀರಿ, ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳೋದಿಲ್ಲ ಎಂಬ ನಿಮ್ಮ ಗುಣ ಪ್ರಸಿದ್ಧಿಗೆ ಕಾರಣವಾಗುತ್ತವೆ. ಊರು ಸುತ್ತಿ, ಅನುಭವ ಹೊತ್ತುಕೊಂಡು ಬರುವ ನಿಮಗೆ ಹೇಳಿಕೊಳ್ಳೋದಿಕ್ಕೆ ಸದಾ ರಾಶಿ ವಿಷಯಗಳಿರುತ್ತವೆ.

ನಿಮ್ಮ ಮನಸ್ಸು ಯಾರಿಗಾದರೂ ಸಹಾಯ ಮಾಡು ಅಂತ ಪ್ರೇರಣೆ ನೀಡೋವರೆಗೂ ದಮ್ಮಯ್ಯ ಗುಡ್ದೆ ಹಾಕಿದರೂ ನಿಮ್ಮಿಂದ ಯಾವ ನೆರವೂ ಸಿಗಲ್ಲ. ಅನುಭವ ಜಾಸ್ತಿ ಅಲ್ವಾ, ನನಗೆ ಎಲ್ಲ ಗೊತ್ತು ಅನ್ನೋ ಗುಣ ಬೋನಸ್ ಥರ ಬಂದಿರತ್ತೆ. ನಿಮಗೆ ಟೀಕೆ-ಟಿಪ್ಪಣಿ ಸಹಿಸೋದು ಕಷ್ಟ. ಮುಂದಿನ ಗುರಿ ಏನು ಎಂದು ಸದಾ ಹಂಬಲಿಸ್ತೀರಿ. ಆ ಕಾರಣಕ್ಕೆ ಜೀವನದ ಭಾವನಾತ್ಮಕ ಕ್ಷಣಗಳನ್ನು ಕಳೆದುಕೊಳ್ತೀರಿ. ನಿಮ್ಮ ರಾಶಿಯ ಅಧಿಪತಿ ಗುರು.

ಮಕರ ರಾಶಿ

ಮಕರ ರಾಶಿ

ಕಣ್ಣಿಗೆ ಕಾಣಿಸೋ ಗುರಿ ಸಾಧಿಸಲು ದುಡಿ, ದುಡಿ.. ಇದು ನಿಮ್ಮ ಮೂಲ ಮಂತ್ರ. ಬೆಟ್ಟದ ಎತ್ತರಕ್ಕೆ ಏರಿದ ನಂತರದ ದೃಶ್ಯ ಚೆಂದ ಎಂಬ ನಂಬಿಕೆ ನಿಮ್ಮದು. ಸದಾ ಕರ್ತವ್ಯ ಅಂತ ಯೋಚ್ನೆ ಮಾಡಿ, ಹೆಚ್ಚು ಪ್ರಬುದ್ಧತೆ ಬಂದಿರುವುದರಿಂದ ನಿಮ್ಮ ವಯಸ್ಸಿಗಿಂತ ಹೆಚ್ಚು ಹಿರಿಯರಂತೆ ಕಾಣ್ತೀರಿ. ಜೀವನದಲ್ಲಿ ತೀರಾ ಗಂಭೀರ ವಿಚಾರ ಚಿಂತೆ ಮಾಡುವ ಕಾರಣಕ್ಕೆ ಒಂದಿಷ್ಟು ನಿರಾಶವಾದ ಕಾಡುತ್ತಿರುತ್ತದೆ. ಕಷ್ಟ ಪಡ್ತೀರಿ, ದೊಡ್ಡದು ಸಾಧಿಸ್ತೀರಿ. ಆದರೆ ಜೀವನದ ತುಂಬ ಸಂತೋಷದ ಕ್ಷಣಗಳನ್ನು ಅನುಭವಿಸಲಾರದೆ ತಪ್ಪಿಸಿಕೊಳ್ತೀರಿ.

ನಿಮ್ಮ ಬಗ್ಗೆ ನಿಮಗಿರುವ ನಿರೀಕ್ಷೆ ಪೂರೈಸುವುದೇ ಕಷ್ಟವಾಗಿಬಿಡುತ್ತದೆ. ಯಾವ ಜವಾಬ್ದಾರಿಯಾದರೂ ನಿಮ್ಮ ಹೆಗಲು ಸಿದ್ಧ ಎಂಬುದು ನಿಮ್ಮ ನಂಬಿಕೆ. ಆ ಕೆಲಸ ಎಷ್ಟು ಪರಿಪೂರ್ಣವಾಗಿ ಆಯಿತು ಎಂಬುದೇ ನಿಮಗೆ ಮುಖ್ಯ ಹೊರತು ಫಲಿತಾಂಶವಲ್ಲ. ನೀವು ಪ್ರಬುದ್ಧರು, ನಂಬಿಕಸ್ತರು ಎಲ್ಲವೂ ಸರಿ. ಆದರೆ ನಿಮ್ಮೊಳಗಿನ ಮಗುವಿನ ಮನಸ್ಸಿಗೆ ಘಾಸಿ ಮಾಡಬೇಡಿ. ನಿಮ್ಮ ನಿರಾಶಾವಾದ, ಗಂಭೀರ ಗುಣದಿಂದ ಅದಕ್ಕೆ ಹಿಂಸೆ ನೀಡಬೇಡಿ. ನಿಮ್ಮ ಅಧಿಪತಿ ಶನಿ.

ಕುಂಭ ರಾಶಿ

ಕುಂಭ ರಾಶಿ

ನೀವು ರೆಬೆಲ್ ಸ್ಟಾರ್. ನಿಯಮಗಳನ್ನು ಮೀರಿ ಯೋಚಿಸುವುದು ಬಹಳ ಇಷ್ಟಪಡ್ತೀರಿ. ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ ಅದೂ ಇದು ಅಂತ ಮಾತನಾಡಿದ್ರೆ ಅದು ಕುಂಭ ರಾಶಿ ಅಂತಲೇ. ಬುದ್ಧಿವಂತಿಕೆ ಇರುತ್ತದೆ. ಮನಸ್ಸೂ ವಿಶಾಲ. ಎಲ್ಲವನ್ನೂ ತಿಳಿದುಕೊಳ್ಳುವ ಹಂಬಲ. ಆದರೆ ಸ್ವತಂತ್ರವಾಗಿ ನಿಮ್ಮನ್ನು ಬಿಡಬೇಕು ಅಂತ ಬಯಸ್ತೀರಿ. ಜನರು ಜಾಸ್ತಿಯಿರುವ ಕಡೆ ನಿಮಗೆ ಕೊಂಚ ಇರುಸುಮುರುಸು. ನೀವೇನೂ ತುಂಬ ಭಾವುಕರಲ್ಲ. ಸಮಸ್ಯೆಗಳನ್ನು ಬುದ್ಧಿಯಿಂದ ಪರಿಹರಿಸಬೇಕು ಎಂದು ನಂಬುವ ನೀವು, ಅದಕ್ಕಾಗಿ ಹೃದಯದಿಂದ ಯೋಚಿಸುವವರಲ್ಲ.

ನಿಮ್ಮ ಆದರ್ಶಗಳು, ಜ್ಞಾನ ಹಾಗೂ ಕ್ರಾಂತಿಕಾರಿ ಆಲೋಚನೆಗಳಿಂದ ಎಲ್ಲರಿಗೂ ಒಂದು ದಾರಿಯಾದರೆ, ನಿಮ್ಮದೇ ಒಂದು ದಾರಿ ಎಂಬಂತಾಗುತ್ತದೆ. ಏನೇ ಏಕಾಂಗಿ ಅಂದರೂ ನೀವು ಮಾಡುವ ಜೋಕ್ ಗಳಿಂದ ಹೊಸಬರು ನಿಮ್ಮ ಕಡೆಗೆ ನಡೆದು ಬರ್ತಾರೆ. ಅಧಿಕಾರದ ವಿಚಾರದಲ್ಲಿ ನಿಮಗೆ ದೊಡ್ಡವರು-ಚಿಕ್ಕವರು ಎಂಬ ಭೇದವೇ ಇಲ್ಲ. ಭಾವನಾತ್ಮಕವಾಗಿ ಎಲ್ಲರಿಗೂ ಸಿಗೋ ಆಸಾಮಿ ನೀವಲ್ಲ. ನಿಮ್ಮ ರಾಶಿ ಅಧಿಪತಿ ಶನಿ.

ಮೀನ ರಾಶಿ

ಮೀನ ರಾಶಿ

ನಿಮ್ಮ ಕನಸು, ಗುರಿಗಾಗಿ ಎಂಥ ತ್ಯಾಗಕ್ಕೂ ನೀವು ಸೈ. ನಿಮ್ಮ ಅಹಂಕಾರ ದೊಡ್ಡ ಮಟ್ಟದಲ್ಲ. ಟೈಲರ್ ಮೇಡ್ ಅಂತಾರಲ್ಲ, ಹಾಗೆ ಎಲ್ಲಿ, ಎಷ್ಟಿರಬೇಕೋ ಅಷ್ಟು. ಬೇರೆಯವರಿಗಾಗಿ ತ್ಯಾಗ ಮಾಡುವ ನಿಮ್ಮ ಗುಣದಿಂದ ಒಂದಿಷ್ಟು ಪೆಟ್ಟು, ಅಬ್ಬುಗಳು ಸಹಜವಾಗಿ ಆಗುತ್ತಾ ಇರುತ್ತವೆ. ನಿಮ್ಮ ಸುತ್ತ ಯಾರು ಇದ್ದಾರೆ, ಇರ್ತಾರೆ ಎಂಬುದರ ಆಧಾರದಲ್ಲಿ ನಿಮ್ಮ ಮೂಡ್ ಬಹಳ ನಿರ್ಣಾಯಕವಾಗಿರುತ್ತದೆ. ಆದರೆ ನಿಮ್ಮ ಪಾಲಿಗೆ ಬಹುತೇಕ ಕೆಟ್ಟ ಪರಿಸರವೇ ಎದುರಾಗುತ್ತದೆ.

ನಿಮ್ಮ ಸುತ್ತ ಇರುವವರ ಮನಸಿನ ಆಲೋಚನೆಗಳು ನಿಮ್ಮೊಳಗೊಂದು ಭಾವ ಸುರಿಯುತ್ತಲೇ ಇರುತ್ತದೆ. ಅದರ ಭಾರ ನೀವು ಹೊರಲೇಬೇಕು. ಆ ಕಾರಣಕ್ಕೆ ಶಾಪಿಂಗ್, ಕುಡಿತ, ಕೆಲವು ಬಾರಿ ಮಾದಕ ವ್ಯಸನಿಗಳಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಯಾವುದೇ ಭಾವನೆಯ ತಾಕಲಾಟಕ್ಕೆ ತಕ್ಷಣ ಸ್ಪಂದಿಸುವುದಕ್ಕೆ ಹೋಗಬೇಡಿ. ಸಮಸ್ಯೆಗೆ ವಿರುದ್ಧ ದಿಕ್ಕಿನಲ್ಲಿ ಓಡಿಹೋಗುವ ಭಯದಿಂದ ಹೊರಬನ್ನಿ. ನಿಮ್ಮ ರಾಶಿ ಅಧಿಪತಿ ಗುರು.

English summary
Characteristics and personality of people based on 12 Zodiac signs in astrology. It is possible to study and understand the personality of people based on individual zodiac signs and horoscope. What is you zodiac sign?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X